Thursday, November 19, 2026

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ | ಮೂರು ಘಟನೆಗಳು: ಸಂಶಯಕ್ಕೆ ದಾರಿಗಳು

ಲೋಕಸಭಾ ಚುನಾವಣೆಯ ಐದು ಹಂತಗಳು ಮುಗಿದು ಇನ್ನೂ ಕೆಲವು ದಿನಗಳಲ್ಲಿ ಮತದಾರ ಪ್ರಭುವಿನ ಆಶಯದಂತೆ ಹೊಸ ಸರ್ಕಾರ ರಚನೆಯಾಗತ್ತದೆ ಎನ್ನುವ ಹಂತದಲ್ಲಿ ಅಸಹಜವಾಗಿ ನಡೆಯುತ್ತಿರುವ ಮೂರು ಘಟನೆಗಳು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಬಿಜೆಪಿ ಹೊರತಾದ ಹೊಸ ಸರ್ಕಾರದ ರಚನೆ ಅಂದುಕೊಂಡಷ್ಟು ಸುಲಭವಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗುತ್ತಿದೆ.

ಘಟನೆ ಒಂದು

ಭಾರತದ ಚುನಾವಣಾ ಆಯೋಗ ನಾಲ್ಕು ಹಂತದ ಚುನಾವಣೆಗಳಿಂದ ನಡೆದಿರುವ ವೋಟಿಂಗ್ ಪರ್ಸಂಟೇಜ್ ನೀಡಿದ್ದು,ಈ ಹಿಂದೆ ನೀಡಿದ ಮತ ಪ್ರಮಾಣಕ್ಕೂ ಈಗ ನೀಡಿರುವ ಮತ ಪ್ರಮಾಣಕ್ಕೂ ಒಟ್ಟು 1.07 ಕೋಟಿ ವೋಟು ಏರಿಕೆ ಕಂಡು ಬಂದಿದೆ. ಚುನಾವಣಾ ದಿನದಂದು ಏಜೆಂಟ್ ಗಳಿಗೆ ನೀಡುವ ಫಾರಂ 17 C ರಲ್ಲಿರುವ ಮತದಾನದ ಪ್ರಮಾಣಕ್ಕೂ ಚುನಾವಣಾ ಆಯೋಗ ನೀಡಿರುವ ಹೊಸ ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ.ಇದರ ಬಗ್ಗೆ ಎಡಿಆರ್ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ‌ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಕೇಳುತ್ತಿರುವ ಪ್ರಶ್ನೆಗೆ ಚುನಾವಣಾ ಆಯೋಗ ಸರಿಯಾಗಿ ಉತ್ತರಿಸುತ್ತಿಲ್ಲ. ಇದು ಇವಿಎಂ ಹ್ಯಾಕಿಂಗ್ ಬಗ್ಗೆ ಅನುಮಾನ ಮೂಡಿಸುವಂತಿದೆ.

ಘಟನೆ ಎರಡು
ಸಂಸತ್ತಿನ ಭದ್ರತೆಯನ್ನು ನಿರ್ವಹಿಸುತ್ತಿದ್ದ ದೆಹಲಿ ಪೋಲಿಸರಿಂದ ಅದನ್ನು ಕಿತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( CISF ) ಗೆ ಈ ಚುನಾವಣಾ ಸಮಯದಲ್ಲಿ ವಹಿಸಿರುವುದು ಸಹ ಆನುಮಾನಕ್ಕೆ ಕಾರಣವಾಗಿದೆ. ಒಂದು ವೇಳೆ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದರೆ ಸಂಸತ್ತಿನ ಸದಸ್ಯರ ಚಲನವಲನಗಳನ್ನು ನಿಯಂತ್ರಿಸಲು ಈ ಕ್ರಮ ಜರುಗಿಸಲಾಗಿದೆ ಎಂದೇ ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಘಟನೆ ಮೂರು

ದೇಶದ ಅತ್ಯಂತ ದೊಡ್ಡ ರಾಜಕೀಯ ತಂತ್ರಗಾರ ಎಂದೇ ಹೆಸರು ಮಾಡಿರುವ ಪ್ರಶಾಂತ್ ಕಿಶೋರ್ ಅವರು ದಿಢೀರ್ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ಚುನಾವಣಾ ಕೊನೆಯಲ್ಲಿ ಮಾಡಿರುವ ಆಗಮನ ಹಲವು ಅನುಮಾನಗಳಿಗೆ ಕಾರಣವಾಗಿದೆ.‌ ಎರಡು ವರ್ಷದ ಕೆಳಗೆ ನಾನು ಇನ್ನು ಮುಂದೆ ರಾಜಕೀಯ ಪಕ್ಷಗಳಿಗೆ ಕನ್ಸಲ್ಟೆನ್ಸಿ ‌ಮಾಡುವುದಿಲ್ಲವೆಂದು ಹೇಳಿ ಬಿಹಾರದಲ್ಲಿ ಆಂದೋಲನ ಮಾಡುತ್ತಿದ್ದ ವ್ಯಕ್ತಿ ದಿಢೀರ್ ಎಂದು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ಮೋದಿಜೀ 303 ಸೀಟು ಗೆಲ್ಲುತ್ತಾರೆ ಎಂದು‌ ಹೇಳುತ್ತಿರುವುದು ಜೊತೆಗೆ ರಾಮಮಂದಿರ ಒಂದು‌ ವೋಟನ್ನು ತರುವುದಿಲ್ಲ. ಮೋದಿಯ ಪ್ರಭಾವ ಕಡಿಮೆಯಾಗಿದೆ ಎಂದು ಹೇಳುತ್ತಾ‌ 303 ಸೀಟು‌ ಗೆಲ್ಲುತ್ತಾರೆ ಎನ್ನುತ್ತಿರುವುದು ವೋಟುಗಳ ಹೇರಾಫೇರಿಯಿಂದ ಉಂಟಾಗುವ ಗೊಂದಲದ ನಿವಾರಣೆಗೆ ನೆಲ ರೆಡಿ ಮಾಡಲು ಪ್ರಶಾಂತ್ ಕಿಶೋರ್ ಅವರಿಗೆ ಸುಪಾರಿ ನೀಡಲಾಗಿದೆಯೇ ಎನ್ನುವ ಚರ್ಚೆ ಸಹ ಮುನ್ನೆಲೆಗೆ ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೋದಿ ಅಲೆ ಎಲ್ಲೂ ಇಲ್ಲ.ಈ ಬಾರಿ ಮೋದಿಯ ಮಾತಿಗಿಂತ
ಬೆಲೆಯೇರಿಕೆ,ನಿರುದ್ಯೋಗ, ಆರ್ಥಿಕ ಅಸಮಾನತೆ,ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಇವೆಲ್ಲಾ ಚುನಾವಣೆಯ ವಿಷಯಗಳಾಗಿದೆ‌.ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಈ ಹಿಂದಿನ ಸಾಧನೆ ಸಾಧ್ಯವಿಲ್ಲ ಎಂದೇ ಮಾಧ್ಯಮಗಳು, ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ.ಆರ್ ಎಸ್ ಎಸ್ ಸರ್ವೆ ಪ್ರಕಾರ ಬಿಜೆಪಿ 210 ರಿಂದ 230 ಗಡಿ ದಾಟಲ್ಲ ಎಂದು ಹೇಳಿದೆ‌.ಆದರೂ ಮೋದಿ ಮತ್ತು ಶಾ ಜೋಡಿ ಚಾರ್ ಸೌ ಪಾರ್ ಎಂದರೂ ದೇಶದಲ್ಲಿ ಅಂತಹ ವಾತಾವರಣ ಇಲ್ಲವೆಂದೇ ಹೇಳಲಾಗುತ್ತಿದೆ. ಆದರೂ ಮೇಲಿನ ಮೂರು ಘಟನೆಗಳು ಮೋದಿ-ಶಾ ಜೋಡಿ ಅಷ್ಟು ಸುಲಭಕ್ಕೆ ಅಧಿಕಾರ ತ್ಯಜಿಸಲ್ಲ ಎಂಬುದಕ್ಕೆ ಇಂಬು ನೀಡುತ್ತಿವೆ.ಈ ಎಲ್ಲಾ ಬೆಳವಣಿಗೆಗಳಿಂದ ಮುಂದಿನ ಸರ್ಕಾರದ ರಚನೆ ಮತ್ತು ರಾಜಕೀಯ ನಡೆಗಳು ತೀವ್ರ ಕೂತೂಹಲಕ್ಕೆ ಕಾರಣವಾಗಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ