Thursday, September 19, 2024

ಪ್ರಾಯೋಗಿಕ ಆವೃತ್ತಿ

ಮತದಾರರ ಪಟ್ಟಿ ದುರ್ಬಳಕೆ ಆರೋಪ ಬಿಜೆಪಿ ವಿರುದ್ಧದ ಪಿತೂರಿ : ಆರ್.ಅಶೋಕ್

ಮತದಾರರ ಪಟ್ಟಿ ದುರ್ಬಳಕೆ ಬಗ್ಗೆ ಕಾಂಗ್ರೆಸ್ ಆರೋಪ ರಾಜ್ಯ ಸರ್ಕಾರದ ವಿರುದ್ಧದ ಪಿತೂರಿಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಚುನಾವಣಾ ಆಯೋಗದ ಕೆಲಸವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ನೂತನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಶುಭ ಕೋರಿ ಮಾತನಾಡಿದ ಅವರು, ಪಟ್ಟಿ ಹಾಗೂ ಕಾರ್ಡ್ ತಯಾರಿಸುವ ಜವಾಬ್ದಾರಿ ಅವರಿಗಿದೆ, ಸುಮ್ಮನೆ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿರುಗೇಟು ಎಂದರು.

ಮೀಸಲಾತಿ ಹೆಚ್ಚಳ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ನಂತರ ಒಂದು ರೀತಿಯಲ್ಲಿ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ ನಾರಾಯಣ ಅವರ ಕೈವಾಡದ ಪ್ರಶ್ನೆಯೇ ಇಲ್ಲ, ಹಿಂದೆನೂ ಕೂಡ ಅದೇ ಕಂಪನಿಗೆ ಕಾಂಗ್ರೆಸ್ ನವರು ಕೂಡ ಜವಾಬ್ದಾರಿ ಕೊಟ್ಟಿರುವುದು ಕಂಡು ಬಂದಿದೆ ಎಂದರು.

ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿಯಲ್ಲಿ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದರೂ ಅವರ ಕ್ರಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಮುಖ್ಯಮಂತ್ರಿಗಳ ಹಾಗೂ ಸಚಿವರ ಪಾತ್ರವಿಲ್ಲ, ಸುಮ್ಮನೆ ಬೇಜವಾಬ್ದಾರಿತನದಿಂದ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಹಿರಿಯ ಮುಖಂಡರಾದ ಯಮದೂರು ಸಿದ್ದರಾಜು, ಎಚ್.ಆರ್.ಅಶೋಕ್ ಕುಮಾರ್, ದೋರನಹಳ್ಳಿ ಕುಮಾರಸ್ವಾಮಿ, ಶಿವಲಿಂಗಪ್ಪ, ಮೋಹನ್, ರಾಜಣ್ಣ, ದೇವರಾಜು, ಮಹೇಂದ್ರ, ಕೆ.ಸಿ.ನಾಗೇಗೌಡ, ಎಂ.ಪಿ.ಗೌಡ, ಪುಟ್ಟಸ್ವಾಮಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!