ಚಾರ್ಜಿಂಗ್ ಹಾಕಿದ್ದ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಮನೆಗೆಲ್ಲಾ ಬೆಂಕಿ ವ್ಯಾಪಿಸಿದ ಪರಿಣಾಮ ಟಿವಿ, ಫ್ರಿಜ್, ದವಸ ಧಾನ್ಯ ಸುಟ್ಟು 5 ಲಕ್ಷ ರೂ.ನಷ್ಟ ಸಂಭವಿಸಿದ ಪ್ರಕರಣ ಮದ್ದೂರು ತಾಲ್ಲೂಕಿನ ವಳೆಗೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ವಳಗೆರೆಹಳ್ಳಿ ಗ್ರಾಮದ ಮುತ್ತುರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳಾದ ಟಿವಿ, ಫ್ರಿಡ್ಜ್ ಹಾಗೂ ದವಸ ಧಾನ್ಯ ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮುತ್ತುರಾಜ್ ಅವರು ಮದ್ದೂರಿನ ಪ್ರವಾಸಿ ಮಂದಿರದ ಬಳಿ ಇರುವ E -ROUTE ಕಂಪನಿಯಲ್ಲಿ ಎಲೆಕ್ಟ್ರಿಕಲ್ ಬೈಕ್ ಅನ್ನು 7 ತಿಂಗಳ ಹಿಂದೆ ಖರೀದಿ ಮಾಡಿದ್ದರು.
ಸ್ಫೋಟಗೊಂಡ ತಕ್ಷಣ ಎಚ್ಚೆತ್ತ ಮುತ್ತುರಾಜ್ ಮತ್ತು ಆತನ ಕುಟುಂಬ ನಾಲ್ವರು ಸದಸ್ಯರು ಮನೆಯಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕ ಪಕ್ಕದ ನಿವಾಸಿಗಳು ಧಾವಿಸಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಡೆದಿದ್ದಾರೆ.




