Friday, September 20, 2024

ಪ್ರಾಯೋಗಿಕ ಆವೃತ್ತಿ

ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡಗಳು…

ವಿವೇಕಾನಂದ ಎಚ್.ಕೆ

ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡಗಳು,
ನಮ್ಮ ಸಮಾಜದ ಮುಖ್ಯ ಗುಣಲಕ್ಷಣಗಳು……

ನಮ್ಮಲ್ಲಿ ಪ್ರಸಾರವಾಗುವ ಧಾರವಾಹಿಗಳ ಕುತಂತ್ರ ಕಥೆಗಳನ್ನು ನೋಡಿ,
ನಾವೆಷ್ಟು ಸುಸಂಸ್ಕೃತರು ಎಂದು ತಿಳಿಯುತ್ತದೆ……

ನಮ್ಮ ರಸ್ತೆಗಳಲ್ಲಿ ವಾಹನಗಳು ಓಡಾಡುವ ಅಶಿಸ್ತನ್ನು, ಅಡ್ಡಾದಿಡ್ಡಿ ಚಾಲನೆಯನ್ನು ನೋಡಿ ತಿಳಿಯುತ್ತದೆ ನಾವೆಷ್ಟು ಸಭ್ಯರು ಎಂದು……..

ಬಸ್ಸು ರೈಲು ನಿಲ್ದಾಣಗಳಲ್ಲಿ ಜನಜಂಗುಳಿ ಇರುವಾಗ ಸೀಟು ಹಿಡಿಯಲು ಜನ ನುಗ್ಗುವುದನ್ನು ನೋಡಿ ನಾವೆಷ್ಟು ನಾಗರಿಕರು ಎಂದು ಅರಿವಾಗುತ್ತದೆ……

ಉಚಿತ ಊಟ ಸೀರೆ ಪಂಚೆ ಹಂಚುವಾಗ ನೋಡಿ ಜನರ ನೂಕಾಟ ಗೊಂದಲ ಹೇಗಿರುತ್ತದೆ ಎಂದು.ಆಗ ತಿಳಿಯುತ್ತದೆ ನಮ್ಮ ಜನರ ಮಾನಸಿಕ ಸ್ಥಿತಿ…….

ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ನಡೆಯುವ ಅಸಂಬದ್ಧ ಚರ್ಚೆಗಳನ್ನು ನೋಡಿ ನಾವೆಷ್ಟು ಬುದ್ದಿವಂತರು ಎಂದು ತಿಳಿಯುತ್ತದೆ……..

ಜ್ಯೋತಿಷಿಗಳು ಹೇಳುವ ಮೂರ್ಖ ಸುಳ್ಳು ಭವಿಷ್ಯವನ್ನು ಕುರುಡಾಗಿ ನಂಬಿ
ಅದರಂತೆ ಬದುಕುತ್ತಿರುವ ಜನರನ್ನು ನೋಡಿ ತಿಳಿಯುತ್ತದೆ ನಾವೆಷ್ಟು ಮುಂದುವರಿದಿದ್ದೇವೆ ಎಂದು…..‌.‌‌‌…

ಸ್ವಂತ ರಕ್ತ ಸಂಬಂಧಿಗಳ ನಡುವೆ ಆಸ್ತಿ ಹಂಚುವಾಗ ದುರಾಸೆಯಿಂದ ನಡೆಯುವ ವರ್ತನೆಗಳನ್ನು ಗಮನಿಸಿ ಆಗ ಗೊತ್ತಾಗುತ್ತದೆ ನಮ್ಮ ಸಂಸ್ಕೃತಿ ಏನೆಂದು……….

ಚುನಾವಣೆ ಗೆಲ್ಲಲು ನಮ್ಮ ಅಭ್ಯರ್ಥಿಗಳು ಮಾಡುವ ಮೂರನೇ ದರ್ಜೆಯ ತಂತ್ರಗಳನ್ನು ನೋಡಿ ಅರಿವಾಗುತ್ತದೆ ನಾವು ಎಂತಹ ವ್ಯವಸ್ಥೆಯಲ್ಲಿದ್ದೇವೆಂದು…….

ಇದು ನಮ್ಮ ಸಮಾಜದ ಮೂಲಭೂತ ಗುಣವೇನು ಅಲ್ಲ. ಆಧುನಿಕತೆಯ, ಜಾಗತೀಕರಣದ ಭರದಲ್ಲಿ ಬದುಕನ್ನು, ಅಭಿವೃದ್ಧಿಯನ್ನು ತಪ್ಪಾಗಿ ಅರ್ಥ್ಯೆಸಿಕೊಂಡಿದ್ದರ ಪರಿಣಾಮ ಇದು.

” Success at anycost ” ” ಹಣವೇ ನಿನ್ನಯ ಗುಣ ” ಎಂದು ಯಶಸ್ವಿ ಜನಗಳನ್ನು ಅವರ ಹಿನ್ನೆಲೆ ಗಮನಿಸದೆ ಜನ ಸಮೂಹ ಗೌರವಿಸಲು ಪ್ರಾರಂಭವಾದಾಗ ಇದು ಮುನ್ನಲೆಗೆ ಬಂದು ಜನರ ವರ್ತನೆ ನಿಯಂತ್ರಿಸಲಾರಂಬಿಸಿತು. ಜನರಲ್ಲಿ ಆಂತರಿಕವಾಗಿದ್ದ ಅಶಿಸ್ತು ಅಜ್ಞಾನ ದುಷ್ಟತನ ಇದರಿಂದಾಗಿ ಪ್ರಲೋಭನೆಗೆ ಒಳಗಾಗಿದೆ……

ಇದನ್ನು ಮೀರುವುದು, ಮುಖವಾಡ ಕಿತ್ತೆಸೆಯುವುದು, ಸಭ್ಯತೆಯನ್ನು ಮೈಗೂಡಿಸಿಕೊಂಡು
ಒಳ್ಳೆಯ ನಾಗರಿಕ ನಡತೆಯನ್ನು ರೂಪಿಸಿಕೊಂಡು ಬದುಕುವುದೇ ಇಂದಿನ ಬಹುದೊಡ್ಡ ಸವಾಲು…..

ಒಳ್ಳೆಯದು ಇಲ್ಲವೆಂದಲ್ಲ. ಅದು ಸಹ ಸಾಕಷ್ಟು ಇದೆ. ಆದರೆ ಕೆಟ್ಟದ್ದು ಹೆಚ್ಚಾಗುತ್ತಿರುವ ಕಾರಣ ಮನಃ ಪರಿವರ್ತನೆಗಾಗಿ ಇದನ್ನು ಎಲ್ಲರ ಆತ್ಮಸಾಕ್ಷಿಗೆ ತಲುಪಲಿ ಎಂಬ ಕಳಕಳಿಯಿಂದ ಮಾತ್ರ ಇದನ್ನು ಹೇಳಲಾಗಿದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!