Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಾವರಿ ಯೋಜನೆ, ಉದ್ಯೋಗ ಸೃಷ್ಟಿಗೆ ಒತ್ತು: ಸ್ಟಾರ್ ಚಂದ್ರು

ನನಗೆ ರಾಜಕೀಯ ಹೊಸದಲ್ಲ. ಇಷ್ಟು ದಿನ ತೆರೆ ಹಿಂದೆ ಇದ್ದೆ. ಈಗ ನೇರವಾಗಿ ಕಣಕ್ಕಿಳಿದಿದ್ದೇನೆ. ಜನ ಸೇವೆ ಮಾಡಲೆಂದು ಬಂದಿದ್ದೇನೆ. ಜನ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಮಳವಳ್ಳಿ ಬಿ.ಜಿ.ಪುರ ಹೊರಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ, ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತಂದು ನೀರಾವರಿ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದರು.

ಉತ್ತಮ ಸ್ಪಂದನೆ

ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಗೆದ್ದೆ ಗೆಲ್ತಿನಿ. ನನ್ನ ಆತ್ಮವಿಶ್ವಾಸ ಡಬಲ್ ಆಗಿದೆ. ನಾನು ಮಂಡ್ಯದ ಮಣ್ಣಿನ ಮಗ. ನನ್ನ ಗೆಲುವು ರೈತರ ಗೆಲುವು. ಇದು ನನ್ನ ಕರ್ಮಭೂಮಿ. ನನ್ನ ಜನ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ನರೇಂದ್ರಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಮಾಜಿ ಜಿಪಂ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ಮಳವಳ್ಳಿ ಕಾಂಗ್ರೆಸ್ ಖಜಾಂಜಿ ಮಹದೇವ್, ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಕುಂದೂರು ಪ್ರಕಾಶ್, ಮಹೇಶ್, ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಠಾಧೀಶರ ಆಶೀರ್ವಾದ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು ಅವರು ತಾಲೂಕಿನ ನಾನಾ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆಶೀರ್ವಾದ ಪಡೆದರು.

ಅಲಸಳ್ಳಿ ಗವಿ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಷಡಕ್ಷರಿ ಸ್ವಾಮಿ ಹಾಗೂ ಹೆಬ್ಣಿ ಪ್ರಭುಲಿಂಗಸ್ವಾಮಿ, ಶಂಭುಲಿಂಗಸ್ವಾಮೀಜಿಗಳಿಗೆ ಹಾರ, ಶಾಲು ಹಾಕಿ ಸನ್ಮಾನಿಸಿ ಆಶೀರ್ವಾದ ಪಡೆದರು.

ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ಅಧ್ಯಕ್ಷರಾದ ಶ್ರೀ ಶ್ರೀ ನಂಜುಂಡಸ್ವಾಮಿ, ಬಿ.ಜಿ.ಪುರ ಹೊರಮಠದ ಚಂದ್ರಶೇಖರ್ ಮಹಾಸ್ವಾಮಿಗಳು, ಮಂಟೇಸ್ವಾಮಿ ಮಠದ ಶ್ರೀ ಶ್ರೀ ಜ್ಞಾನೇಶ್ ಮಹಾಸ್ವಾಮಿಗಳ ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಮಾಜದಲ್ಲಿ ಏಳಿಗೆಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಶೈಕ್ಷಣಿಕ ಕ್ರಾಂತಿ ಉಂಟುಮಾಡುವಲ್ಲಿ ಮಠಗಳ ಪಾತ್ರ ಅಗಾದವಾದದ್ದು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಶಾಲಾ, ಕಾಲೇಜುಗಳ ಉನ್ನತೀಕರಿಸುವ ಕನಸು ಕಂಡಿದ್ದು, ಇದಕ್ಕೆ ಮಠಾಧೀಶರ ಆಶೀರ್ವಾದ ಬೇಕೆಂದು ಕೋರಿದರು.

ನಾನಾ ಸಮುದಾಯದ ಮುಖಂಡರ ಭೇಟಿ

ಮಳವಳ್ಳಿ ತಾಲೂಕಿನ ಉಪ್ಪಾರ ಸಮಾಜ, ಸವಿತಾ ಸಮಾಜ, ಮಡಿವಾಳ, ಬೆಸ್ತ ಸಮಾಜ, ಕ್ರೈಸ್ತ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಬೆಂಬಲ ಕೋರಿದರು.

ತಳ ಸಮುದಾಯಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ತಂದಿದೆ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಹೀಗಾಗಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಕಾಂಗ್ರೆಸ್ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!