Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆಗೆ ಗರಿಷ್ಠ ಉತ್ತೇಜನ: ಚಲುವರಾಯಸ್ವಾಮಿ

ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ಗರಿಷ್ಠ ನೆರವು ಒದಗಿಸಲಾಗುತ್ತಿದೆ. ಈ ಸಾಲಿನಲ್ಲಿ ವಿಮಾನ ನಿಲ್ದಾಣಗಳ ಹತ್ತಿರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಸೋಗಾನೆ ಹಾಗೂ ವಿಜಯಪುರದ ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕುಗಳನ್ನು ಸ್ಥಾಪಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಸದಸ್ಯರಾದ ಟಿ.ಬಿ.ಜಯಚಂದ್ರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸದ ಸಚಿವರು ರಾಜ್ಯದಲ್ಲಿ ಪುಡ್ ಪಾರ್ಕ್ ಗಳ ಸ್ಥಾಪನೆಗೆ ಪ್ರೋತ್ಸಾಹದ ಜೊತೆಗೆ ಬ್ರಾಂಡಿಗ್ ಗೂ ನೆರವು ಒದಗಿಸಲಾಗುತ್ತಿದೆ ಎಂದರು.

ಆಹಾರ ಪಾರ್ಕ್‍ಗಳ ಅನುಷ್ಠಾನಕ್ಕೆ ಹಾಗೂ ಮೇಲುಸ್ತುವಾರಿ ನಿರ್ವಹಿಸಲು ಆಹಾರ ಕರ್ನಾಟಕ ನಿಯಮಿತ ಎಂಬ ವಿಶೇಷ ಉದ್ದೇಶ ಸಂಸ್ಥೆಯನ್ನು (Special Purpose Vehicle) 2003ರಲ್ಲಿ ಕಂಪನಿ ಕಾಯ್ದೆ 1956ರಡಿಯಲ್ಲಿ ಸ್ಥಾಪಿಸಲಾಗಿದೆ. ಆಹಾರ ಕರ್ನಾಟಕ ನಿಯಮಿತವು ಈ ಹಿಂದೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿಯಲ್ಲಿದ್ದು, ಪ್ರಸ್ತುತ ಕೃಷಿ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯವು ರಾಜ್ಯದಲ್ಲಿ ಹತ್ತನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ನಾಲ್ಕು ಆಹಾರ ಪಾರ್ಕುಗಳನ್ನು ಸ್ಥಾಪಿಸಲು ಅನುಮೋದನೆ ನೀಡಿರುತ್ತದೆ. ಅದರಂತೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅಕ್ಷಯ ಫುಡ್‌ ಪಾರ್ಕ್‌, ಬಾಗಲಕೋಟೆಯಲ್ಲಿ ಗ್ರೀನ್‌ ಫುಡ್‌ ಪಾರ್ಕ್‌, ಕೋಲಾರ ಜಿಲ್ಲೆ ಮಾಲೂರಿನಲ್ಲಿ ಇನ್ನೋವಾ ಅಗ್ರಿ ಬಯೋಪಾರ್ಕ್‌, ಮತ್ತು ಕಲಬುರ್ಗಿ ಜಿಲ್ಲೆಯ, ಜೇವರ್ಗಿಯಲ್ಲಿ ಫುಡ್‌ ಪಾರ್ಕ್‌, ಸ್ಥಾಪಿಸಲಾಗಿದೆ. ಉದ್ದೇಶಿತ ಯೋಜನೆಯನ್ವಯ ಪ್ರತಿ ಆಹಾರ ಪಾರ್ಕ್ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಒಟ್ಟು 800 ಲಕ್ಷ ರೂಪಾಯಿಗಳನ್ನು ಸಹಾಯ ಧನ,ಬಡ್ಡಿ ರಹಿತ ಅಸುರಕ್ಷಿತ ಸಾಲದ ರೂಪದಲ್ಲಿ ಮಂಜೂರು ಮಾಡಿರುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯದ ಆಹಾರ ಪಾರ್ಕುಗಳನ್ನು ಬಲವರ್ದಿಸುವ ನಿಟ್ಟಿನಲ್ಲಿ ನಬಾರ್ಡ್ ಸಂಸ್ಥೆಯ ಅಂಗ ಸಂಸ್ಥೆಯಾದ NABCONS ಸಂಸ್ಥೆಯ ವತಿಯಿಂದ ರಾಜ್ಯ ಪ್ರಾಯೋಜಿತ ಆಹಾರ ಪಾರ್ಕುಗಳ ಪರಿಣಾಮ ಪರಿಶೀಲನಾ  ಅಧ್ಯಯನ ನಡೆಸಲಾಗಿದೆ ಎಂದರು.

ಆಹಾರ ಪಾರ್ಕುಗಳಲ್ಲಿನ ಆಂತರಿಕ ರಸ್ತೆ, ಚರಂಡಿಗಳು ಹಾಗೂ ಮೂಲಸೌಕರ್ಯಗಳ ದುರಸ್ಥಿ, ಉನ್ನತೀಕರಣಕ್ಕಾಗಿ ಆಹಾರ ಪಾರ್ಕಿನ ಪ್ರವರ್ತಕರುಗಳೇ ಕ್ರಮ ವಹಿಸಬೇಕಾಗಿದ್ದು, NABARD ಸಂಸ್ಥೆಯಿಂದ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿರುವ ಆಹಾರ ಸಂಸ್ಕರಣಾ ನಿಧಿಯಿಂದ ಅಥವಾ India Infrastructure Fund ನಲ್ಲಿ ಇಕ್ವಿಟಿ ರೂಪದಲ್ಲಿ ನೀಡಲಾಗುತ್ತಿರುವ ಸಾಲ ಸೌಲಭ್ಯವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ ಎಂದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ರೈತರ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು ಬೆಳೆಯುತ್ತಿರುವ ಉತ್ಪನ್ನಗಳನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೊಳಿಸಲು ಆಹಾರ ಪಾರ್ಕುಗಳಲ್ಲಿ ಲಭ್ಭ್ಯವಿರುವ ಸಾಮಾನ್ಯ ಸೌಲಭ್ಯಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ಆಹಾರ ಪಾರ್ಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಸ್ಕರಣ ಘಟಕಗಳು ಸ್ಥಾಪನೆಯಾಗಿಲ್ಲದೇ ಇರುವುದರಿಂದ ಆಹಾರ ಪಾರ್ಕುಗಳ ಪ್ರವರ್ತಕರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಏಕಗವಾಕ್ಷಿ ಸಮಿತಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸಹಯೋಗವನ್ನು ಪಡೆದು ಕೈಗಾರಿಕೆಗಳ ಸ್ಥಾಪನೆಗೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಘಟಕ ಪ್ರಾರಂಭಿಸಲು ಆಸಕ್ತಿ ವಹಿಸದ ಉದ್ದಿಮೆದಾರರಿಂದ ಕೈಗಾರಿಕಾ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಹಯೋಗದೊಂದಿಗೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!