ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿರುವ ಜನಪ್ರಿಯ ಉಚಿತ ಸಾರಿಗೆ ಸೇವೆ ಒದಗಿಸುವ ಶಕ್ತಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 14.95 ಕೋಟಿ ಪ್ರಯಾಣಗಳು ನಡೆದಿದ್ದು, ಲಕ್ಷಾಂತರ ಮಹಿಳಾ ಪ್ರಯಾಣಿಕರು ಶಕ್ತಿಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಒಟ್ಟು ಆದಾಯ ರೂ. 398.99 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಂಡ್ಯ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ದಿ ಕಾರ್ಯಕ್ರಮಗಳ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ರಾಜ್ಯದಾದ್ಯಂತ 500 ಕೋಟಿ ಪ್ರಯಾಣ ಪೂರೈಸಿರುವ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಉಚಿತ ಟಿಕೆಟ್ ವಿತರಿಸಿ ಅವರು ಮಾತನಾಡಿದರು.

500 ಕೋಟಿಗೂ ಹೆಚ್ಚು ಪ್ರಯಾಣ ಐತಿಹಾಸಿಕ ದಾಖಲೆ
ರಾಜ್ಯಾದ್ಯಂತ ಪಂಚ ಗ್ಯಾರಂಟಿಗಳು ಎರಡೂ ವರ್ಷಗಳನ್ನು ಪೂರೈಸಿದೆ. ಶಕ್ತಿ ಯೋಜನೆ ಒಂದಕ್ಕೆ 12 ಸಾವಿರದ 800 ಕೋಟಿ ಅನುದಾನವನ್ನು ನೀಡಲಾಗಿದೆ. ಶಕ್ತಿ ಯೋಜನೆ ರಾಜ್ಯದ ಅನೇಕ ಮಹಿಳೆಯರಿಗೆ ಸಹಕಾರಿಯಾಗಿದೆ. ರಾಜ್ಯಾದ್ಯಂತ ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳಾ ಟಿಕೆಟ್ ವಿತರಿಸಲಾಗಿದೆ. ಇದೊಂದು ಐತಿಹಾಸಿಕ ದಾಖಲೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳು ರಾಜ್ಯದ ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ಗೃಹಿಣಿಯರು ಗೃಹಲಕ್ಷ್ಮಿ ಹಣ ಶೇಖರಿಸಿ ಹಸು, ಅಂಗಡಿ, ಲೈಬ್ರರಿ ಮತ್ತು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಗೆ ಹಾಗೂ ಮುಂತಾದ ಕಾರಣಗಳಿಗೆ ಸಮರ್ಪಕವಾಗಿ ಉಯೋಗಿಸಿಕೊಂಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಮೂಲ ಉದ್ದೇಶ ಬಡ ಜನರ ಜೀವನ ಮಟ್ಟವನ್ನು ಸುಧಾರಿಸುವುದು. ಆದ್ದರಿಂದಲೇ ಪಂಚ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಯಿತು. ಇಂದು ಗ್ಯಾರಂಟಿ ಯೋಜನೆಗಳು ಎಷ್ಟೋ ಕಡುಬಡ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು, ಮಂಡ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ, ವಿಭಾಗಿಯ ಸಂಚಾರಾಧಿರಿ ಪರಮೇಶ್ವರಪ್ಪ, ಡಿಪೋ ಮ್ಯಾನೇಜರ್ ರಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




