Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಿಸಬೇಕಿದೆ

ನಮ್ಮ ಪೂರ್ವಿಕರು ನೆಟ್ಟು ಬೆಳೆಸಿದ ಗಿಡ,ಮರಗಳಿಂದ ನಾವು ಉಸಿರಾಡುತ್ತಿದ್ದೇವೆ. ಅದೇ ರೀತಿ ನಾವೂ ಸಹ ಮುಂದಿನ ಪೀಳಿಗೆಗೆ ಪರಿಸರ ರಕ್ಷಿಸಿ ಕೊಡಬೇಕಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಸಲಹೆ ನೀಡಿದರು.

ಮಂಡ್ಯ ನಗರದ 25ನೇ ವಾರ್ಡ್ ನಲ್ಲಿರುವ ಹಿಂದೂ ಹಾಗೂ ಜೈನ ಸ್ಮಶಾನದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಪರಿಸರ ಉಳಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಮನೆಯಲ್ಲಿ ನಾವು ಮಕ್ಕಳನ್ನು ಯಾವ ರೀತಿ ಪೋಷಣೆ ಮಾಡುತ್ತೇವೋ ಅದೇ ಮಾದರಿಯಲ್ಲಿ ಮನೆಗೊಂದು ಸಸಿ ನೆಟ್ಟು ಮರವಾಗುವಂತೆ ಬೆಳೆಸಬೇಕು. ಇದರಿಂದ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ನಮ್ಮ ತಾತ-ಮುತ್ತಾತಂದಿರು ಗಿಡ-ಮರ ಬೆಳೆಸಿ ನಮಗೆ ಕೊಡುಗೆ ನೀಡಿದ್ದರು. ಅದೇ ರೀತಿ ನಾವು ಗಿಡ-ಮರ ಬೆಳೆಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದು ತಿಳಿಸಿದರು.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗುದೆ.ಆದರೂ ಪ್ಲಾಸ್ಟಿಕ್ ಅನ್ನು ಜನರು ಬಳಸುತ್ತಿದ್ದು,ಜನತೆ ಪ್ಲಾಸ್ಟಿಕ್ ತ್ಯಜಿಸುವ ಮನಸ್ಸು ಮಾಡಬೇಕು. ಪ್ರತಿಯೊಬ್ಬರು ಅಂಗಡಿ-ಮಾರುಕಟ್ಟೆಗೆ ಹೋಗುವಾಗ ಬಟ್ಟೆ ಬ್ಯಾಗ್‌ಗಳನ್ನು ಕೊಂಡೊಯ್ಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ವರ್ತಕರೂ ಸಹ ಪ್ಲಾಸ್ಟಿಕ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು. ಇದರಿಂದ ಮಾತ್ರ ಪ್ಲಾಸ್ಟಿಕ್ ನಿಷೇದ ಮಾಡಬಹುದು. ಸಮುದಾಯದ ಸಹಕಾರವಿಲ್ಲದಿದ್ದರೆ ಏನೂ ಮಾಡಲಾಗದು ಎಂದು ಹೇಳಿದರು.

ಕಾಳೇನಹಳ್ಳಿ ಬಳಿ ಇರುವ ನಮ್ಮ ಕಸ ಸಂಗ್ರಹಣಾ ಘಟಕದಲ್ಲಿ ಸುಮಾರು 70 ರಿಂದ 80 ಟನ್‌ನಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಇದು ಪರಿಸರಕ್ಕೆ ಅತಿ ಹೆಚ್ಚು ಮಾರಕವಾಗುತ್ತದೆ. ಇದರಿಂದಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತಹ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

25ನೇ ವಾರ್ಡ್ ನ ನಗರ ಸಭಾ ಸದಸ್ಯ ನಾಗೇಶ್ ಮಾತನಾಡಿ, ಉದಯಗಿರಿ ಸ್ಮಶಾನದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಗಿಡ ನೆಡುವ ಕಾರ‍್ಯಕ್ರಮ ಹಮ್ಮಿಕೊಂಡಿದ್ದೇವೆ. ಸ್ಮಶಾನದಲ್ಲಿ ಮಾತ್ರ ಗಿಡ ನೆಟ್ಟರೆ ಸಾಲದು, ಎಲ್ಲೆಲ್ಲಿ ಖಾಲಿ ಜಾಗ ಇರುತ್ತೋ ಅಲ್ಲೆಲ್ಲಾ ಗಿಡ ನೆಡುವಂತಹ ಕಾರ‍್ಯ ಮಾಡಬೇಕು ಎಂದು ಸಲಹೆ ನೀಡಿದರು.

ಬಡಾವಣೆಗೊಂದು ವನ, ಮನೆಗೊಂದು ಗಿಡ ಎಂಬ ಘೋಷವಾಕ್ಯದಂತೆ ನಾವು ಗಿಡ ನೆಟ್ಟು ಬೆಳೆಸಬೇಕಾಗಿದೆ. ಗಾಳಿ, ಬೆಳಕು ನೀರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಪರಿಸರ ಅಭಿಯಂತರ ರುದ್ರೇಗೌಡ, ಜೈನ ಸಮುದಾಯದ ಅಧ್ಯಕ್ಷ ಶಾಂತಿಪ್ರಸಾದ್, ಯಜಮಾನ್ ಮಾದಯ್ಯ ಸೇರಿದಂತೆ ಲೇಬರ್ ಕಾಲೋನಿ ಹಾಗೂ ಉದಯಗಿರಿ ನಿವಾಸಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!