Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬ ರೈತರೂ ಇ-ಕೆವೈಸಿ ಮಾಡಿಸಲು ಮನವಿ

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಲು 11,539 ರೈತರು   ಇ- ಕೆವೈಸಿಗೆ ನೊಂದಣಿಯಾಗಬೇಕಿದ್ದು, ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಇದಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಕಂದಾಯ ಇಲಾಖೆಯ ಸಹಕಾರ ನೀಡಿ ರೈತರಿಗೆ ನೆರವಾಗಬೇಕು ಎಂದು ತಹಸೀಲ್ದಾರ್ ನಿಸರ್ಗ ಪ್ರಿಯ ಹೇಳಿದರು.

ಕೆ.ಆರ್. ಪೇಟೆ ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಯ ನೌಕರರ ಸಭೆಯಲ್ಲಿ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸಹಾಯ ಧನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯ 14ನೇ ಕಂತಿನ ಹಣ ಬಿಡುಗಡೆಯು ಪ್ರಗತಿಯಲ್ಲಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿತ ಎಲ್ಲ ರೈತರೂ ಮಾಡಿಸಿದರಷ್ಟೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ
ವಾರ್ಷಿಕ ರೂ. 6000 ರೂ ಹಾಗೂ ರಾಜ್ಯ ಸರ್ಕಾರದಿಂದ ಒಂದೇ ಬಾರಿಗೆ ರೂ. 4000ರೂ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಆದರೆ ಸಮರ್ಪಕವಾಗಿ ಇ-ಕೆವೈಸಿ ಆಗದ ಕಾರಣ ಈ ಸಹಾಯಧನವು ಕೆಲವು ರೈತರ ಖಾತೆಗೆ ಜಮೆ ಆಗುತ್ತಿಲ್ಲ. ಹೀಗಾಗಿ ರೈತರು ಆದಷ್ಟು ಬೇಗ
ಇ-ಕೆವೈಸಿ ಮಾಡಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು ಎಂದರಿ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದುವರೆಗೆ ಕಸಬಾ ಹೋಬಳಿಯ ಫಲಾನುಭವಿಗಳಿಗೆ 2247, ಅಕ್ಕಿಹೆಬ್ಬಾಳು ಹೋಬಳಿಯ 2231, ಕಿಕ್ಕೇರಿ ಹೋಬಳಿಯ 2369, ಬೂಕನಕೆರೆ ಹೋಬಳಿಯ 1234 ಹಾಗೂ ಶೀಳನೆರೆ ಹೋಬಳಿಯ 1396, ಸಂತೇಬಾಚಹಳ್ಳಿ ಹೋಬಳಿಯ 1265ಮಂದಿ ಸೇರಿ ಒಟ್ಟು 11,539 ಮಂದಿ ನೊಂದಣಿ ಮಾಡಿಸುವುದು ಬಾಕಿ ಇರುತ್ತದೆ.
ಕೆಲ ರೈತರು ಯೋಜನೆಯ ನೋಂದಾವಣೆ ಸಮಯದಲ್ಲಿ ನೀಡಿರುವ ಮೊಬೈಲ್ ಸಂಖ್ಯೆ ತಪ್ಪಾಗಿರುವುದು, ಕೆಲ ರೈತರು ಜಮೀನನ್ನು ಖರೀದಿ ಮಾಡಿಕೊಂಡು, ಬೇರೆಡೆ ವಾಸ ಮಾಡುತ್ತಿರುವುದರಿಂದ ಕೈಗೆ ಸಿಗುತ್ತಿಲ್ಲ. ಇನ್ನು ಕೆಲ ರೈತರು 2019 ರಲ್ಲಿ ನೋಂದಾವಣೆಯಾದ ಪೌತಿಯಾಗಿರುವುದು, ಮತ್ತೆ ನಂತರ ಕೆಲವರು ತೆರಿಗೆದಾರರಾಗಿದ್ದು, ಈಗ ಇ-ಕೆವೈಸಿಯಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇ-ಕೆವೈಸಿ ನೋಂದಣಿ ಆಂದೋಲನ:
ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಪ್ರತಿ ದಿನ ಒಂದೊಂದು ಗ್ರಾಮಕ್ಕೆ ಬೆಳಿಗ್ಗೆ 8ಕ್ಕೆ ಅಧಿಕಾರಿಗಳ ತಂಡ ತೆರಳಿ, ಗ್ರಾಮದ ಕೇಂದ್ರ ಸ್ಥಾನ ಅಥವಾ ಚಾವಡಿಗಳ ಬಳಿ ಇ-ಕೆವೈಸಿ ಮಾಡುತ್ತಿದೆ. ವಿದ್ಯಾವಂತ ಯುವಕರಲ್ಲಿ ಇ-ಕೆವೈಸಿ ಮಾಡುವ ಸುಲಭ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರಿಂದ ಉಳಿದಿರುವ ಆಯಾ ಗ್ರಾಮದಲ್ಲಿ ಬಾಕಿ ಪ್ರಕರಣಗಳು ಇತ್ಯರ್ಥವಾಗಲು ಸಹಾಯವಾಗುತ್ತದೆ. ಹೀಗಾಗಿ ರೈತರು ಕೂಡಲೇ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಅಧಿಕಾರಿಗಳನ್ನು ಬೇಟಿ ಮಾಡಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಕೃಷಿ ಇಲಾಖೆಯು ನಿರಂತರವಾಗಿ ರೈತ ಇ-ಕೆವೈಸಿ ಮಾಡಿಕೊಳ್ಳುವಂತೆ ಬಹಳಷ್ಟು ಪ್ರಚಾರ ನೀಡುತ್ತಿದೆ. ಆದರೆ ಕೆಲವು ರೈತರು ಹಿಂದೇಟು ಹಾಕುತ್ತಿದ್ದಾರೆ.ಈ ರೀತಿ ಮಾಡದೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್.ಮಂಜುನಾಥ್ ಕೋರಿದ್ದಾರೆ.

ಸಭೆಯಲ್ಲಿ ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್, ಕೃಷಿ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ಕೃಷಿ ತಾಂತ್ರಿಕ ಅಧಿಕಾರಿ ಶ್ರೀಧರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್ ತೋಟಗಾರಿಕಾ ಅಧಿಕಾರಿ ಡಾ.ಆರ್.ಜಯರಾಂ, ರಾಜಸ್ವ ನಿರೀಕ್ಷಕರಾದ ಹರೀಶ್, ಚಂದ್ರಕಲಾಪ್ರಕಾಶ್, ನರೇಂದ್ರ, ರಾಜಮೂರ್ತಿ, ಗೋಪಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!