ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಿಲ್ಲೆಯಾದ್ಯಂತ ರಾಸುಗಳಿಗೆ ವಿಮೆ ಮಾಡಿಸಲು ತೀರ್ಮಾನಿಸಿದ್ದು, ಪ್ರತಿಯೊಬ್ಬ ಹಾಲು ಉತ್ಪಾದಕರು ತಪ್ಪಿಸದೆ ರಾಸುಗಳಿಗೆ ವಿಮೆ ಮಾಡಿಸಬೇಕೆಂದು ಮನ್ ಮುಲ್ ನಿರ್ದೇಶಕಿ ರೂಪ ಸಲಹೆ ನೀಡಿದರು.
ಮದ್ದೂರು ತಾಲೂಕಿನ ಮಾದಾಪುರ ದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ರಾಸುಗಳಿಗೆ ವಿಮೆ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಕ್ಕೂಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಾಸುಗಳಿಗೆ ವಿಮೆ ಮಾಡಿಸಲು ಇಂದಿನಿಂದ ಚಾಲನೆ ನೀಡಲಾಗಿದೆ. ಉತ್ಪಾದಕರು 25% ಕಟ್ಟಿದರೆ 75% ಒಕ್ಕೂಟದಿಂದ ಭರಿಸಲಾಗುವುದು. ಜಿಲ್ಲೆಯ ಎಲ್ಲಾ ರೈತರು ತಪ್ಪದೆ ತಮ್ಮ ರಾಸುಗಳಿಗೂ ವಿಮೆ ಮಾಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ನಮ್ಮ ರೈತರು 60 ಸಾವಿರ, ಒಂದು ಲಕ್ಷ ಕೊಟ್ಟು ರಾಸುಗಳನ್ನು ತಂದಿರುತ್ತಾರೆ.ಆದರೆ ವಿಮೆ ಮಾಡಿಸಲು ವಿಳಂಬ ಮಾಡುತ್ತಾರೆ. ಇನ್ನೊಂದು ದಿನ ಮಾಡಿಸಿದರಾಯಿತು ಎಂದು ಸಾಕಷ್ಟು ವಿಳಂಬ ಮಾಡುತ್ತಾರೆ. ಕೊನೆಗೆ ರಾಸುಗಳಿಗೆ ಹೆಚ್ಚು ಕಮ್ಮಿ ಆಗಿ ತೊಂದರೆಗೆ ಸಿಲುಕಿ ಕಷ್ಟ ಪಡುತ್ತಾರೆ. ಹೀಗಾಗಬಾರದು ಎಂದರೆ, ಪ್ರತಿಯೊಬ್ಬರೂ ವಿಮೆ ಮಾಡಿಸಬೇಕು ಎಂದರು.
ಒಕ್ಕೂಟದಿಂದ ಏನೇ ಸವಲತ್ತುಗಳು ಬಂದರೂ ಅದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ವಿಮೆ ಮಾಡಿಸಲು 90 ದಿನಗಳು ಅವಕಾಶವಿದ್ದು,ಹಾಲು ಉತ್ಪಾದಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಮತಾ, ನಿರ್ದೇಶಕಿ ನಿಂಗಮ್ಮ, ರೂಪ, ಕಾರ್ಯದರ್ಶಿ ಸಿಂಧು, ಪಶುವೈದ್ಯ ಶರತ್, ಕಾರ್ಯದರ್ಶಿಗಳಾದ ರವಿ, ಕಾಂತರಾಜು, ಶ್ರೀನಿವಾಸ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.