ಸಂಸದೆ ಸುಮಲತಾ ಅಂಬರೀಷ್ ಮೂರು ತಿಂಗಳಿಗೊಮ್ಮೆ ನಡೆಯುವ ದಿಶಾ ಸಭೆಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.
ಕೆ.ಆರ್.ಎಸ್. ಜಲಾಶಯದಿಂದ 72 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಸಂಸದೆ ಸುಮಲತಾ ಅಂಬರೀಷ್ ಕೇವಲ ದಿಶಾ ಸಭೆಯಲ್ಲೆ ಮುಳುಗಿದ್ದಾರೆ.
ದಿಶಾ ಸಭೆ ಮಾಡಿದರೆ ಸಾಕು, ಮಂಡ್ಯದ ಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಭಾವಿಸಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಗಳು ನಡೆಯುತ್ತಿವೆ. ಇಂತಹ ಸಭೆಗಳಿಗೆ ಆಹ್ವಾನವಿದ್ದರೂ ಕೂಡ ಭಾಗವಹಿಸದೆ ಕೇವಲ ದಿಶಾ ಸಭೆಗೆ ಸೀಮಿತರಾಗಿದ್ದಾರೆ.
ಕೆ.ಆರ್.ಎಸ್. ಜಲಾಶಯಕ್ಕೆ ಸಮೀಪದಲ್ಲೇ ಶ್ರೀರಂಗಪಟ್ಟಣವಿದ್ದು,
ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದಾಗ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ಸರ್ಕಾರ ಈ ಸಮಸ್ಯೆಗೆ ಮೊದಲು ಆದ್ಯತೆ ನೀಡಬೇಕು. ಅಗತ್ಯವಿರುವ ಕಡೆ ಶೀಘ್ರ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು
ಸ್ಥಳೀಯವಾಗಿ ನಗರೋತ್ಥಾನ ಹಾಗೂ ಶಾಸಕರ ಅನುದಾನದಲ್ಲಿ ಸಂತೆ ಮಾಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಹಣ ಸಾಲುವುದಿಲ್ಲ. ಸರ್ಕಾರ ಆದಷ್ಟು ಬೇಗ ಅಗತ್ಯವಿರುವ ಕಡೆಗಳಲ್ಲಿ ತಡೆ ಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಇನ್ನು ಎರಡು- ಮೂರು ದಿನಗಳು ಮಳೆಯಾಗುವ ಸಾಧ್ಯತೆ ಇದೆ.ಆದ್ದರಿಂದ ಸ್ಥಳೀಯ ಪುರಸಭೆ ಸದಸ್ಯರು, ಅಧಿಕಾರಿಗಳು ಪಟ್ಟಣ ವ್ಯಾಪ್ತಿ ಜನರಿಗೆ ಪ್ರವಾಹದಿಂದ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು.
ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದರು. ಜಿಲ್ಲಾಡಳಿತ ಕೂಡ ಪ್ರವಾಹ ಪರಿಶೀಲನೆ ಮಾಡುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಮೂಲಕ ಪ್ರವಾಸ ಪರಿಸ್ಥಿತಿ ನಿಭಾಯಿಸಲು ಮುಂದಾಗಬೇಕೆಂದರು.
ಎಚ್.ಡಿ.ಕುಮಾರ ಸ್ವಾಮಿ ಅವರು ಜಾತಿ ಬೇಧ ಮಾಡದೆ ಎಲ್ಲರ ಪರವಾಗಿದ್ದು, ಹೋರಾಟ ಮಾಡುತ್ತಿದ್ದಾರೆ.ಜನರಿಗಾಗಿ ಹೋರಾಟ ನಡೆಸುತ್ತಿರುವ ಕುಮಾರಸ್ವಾಮಿ ಅವರಿಗೆ ಬೆದರಿಕೆ ಪತ್ರಗಳು ಬರುವುದು ಸಾಮಾನ್ಯ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.