ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವ ಜೆಡಿಎಸ್ ಮುಖಂಡ ಶ್ರೀನಿವಾಸ್ ಕಾಮತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ನೀಚ ಕೆಲಸ ಮಾಡುತ್ತಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿ ಶಿಕ್ಷಿಸಬೇಕು.ಇಂತಹ ವ್ಯಕ್ತಿಗಳು ಕ್ಷಮೆ ಕೇಳಿದರೆ ಸಾಲದು, ಈ ರೀತಿಯ ಕೃತ್ಯಗಳು ಆ ಪಕ್ಷದ ಮನೋಭಾವವನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷದಲ್ಲಿರುವ ಸಮಾಜದ ಮುಖಂಡರು ರಾಜೀನಾಮೆ ನೀಡಿ ಹೊರಬರಬೇಕು.ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿರುವ ಕಿಡಿಗೇಡಿಯನ್ನು ಬಂಧಿಸದಿದ್ದರೆ ಮಂಡ್ಯ ಜಿಲ್ಲಾ ಕುರುಬರ ಸಂಘವು ಜಿಲ್ಲೆಯ ಏಳು ತಾಲ್ಲೂಕುಗಳ ಕುರುಬರ ಸಂಘಗಳೊಂದಿಗೆ ಜಂಟಿಯಾಗಿ ಉಗ್ರ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿ ತೆಗೆದುಹಾಕುವ ಹುನ್ನಾರ ನಡೆದಿದ್ದು, ಹಿಂದುಳಿದ ವರ್ಗಗಳ ಜನರ ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದರು.
ಪಠ್ಯಪುಸ್ತಕ ಪರಿಷ್ಕರಣೆಯನ್ನು ಸರ್ಕಾರವು ಹೆಡಗೇವಾರ್ ರಂತಹ ಮನುಸ್ಕೃತಿ ಮನಸ್ಸಿನ ರೋಹಿತ್ ಚಕ್ರತೀರ್ಥ ಮುಖಂಡತ್ವದಲ್ಲಿ ಮಾಡಿರು ತ್ತದೆ. ಈ ಪರಿಷ್ಕರಣೆಯಲ್ಲಿ ಪಠ್ಯ ಪುಸ್ತಕಗಳಲ್ಲಿನ ಅನೇಕ ಜಾತ್ಯಾತೀತರ ವಿಚಾರಗಳನ್ನು ಕೈಬಿಟ್ಟಿರುತ್ತಾರೆ, ಕುವೆಂಪುರವರ ನಾಡಗೀತೆ ಬಗ್ಗೆ, ಅಂಬೇಡ್ಕರವರ ಸಂವಿಧಾನ ಶಿಲ್ಪಿ ಎಂಬ ಬಿರುದನ್ನು ತೆಗೆದುಹಾಕಿರುವ ಬಗ್ಗೆ, ಬುದ್ಧ, ಬಸವ, ಕನಕ, ಮಹಾನ್ ದೇಶಭಕ್ತ ರಾಷ್ಟ್ರಕ್ಕೆ ಪ್ರಾಣ ಅರ್ಪಿಸಿದ ಸಂಗೊಳ್ಳಿರಾಯಣ್ಣರವರ ವಿಚಾರಧಾರೆಗಳನ್ನು ಕೈಬಿಟ್ಟು ಅವಮಾನಿಸಿರುತ್ತಾರೆ.
ಆದ್ದರಿಂದ ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದು ಮಾಡಿ ಹಿಂದಿನ ಪಠ್ಯಪುಸ್ತಕವನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಮಹೇಶ್, ಲೋಕೇಶ್, ಸತೀಶ್, ಸುರೇಶ್ ಹಾಗೂ ಮೋಹನ್ ಹಾಜರಿದ್ದರು.