ಸುಶಿಕ್ಷಿತ ವರ್ಗವಾದ ಪದವೀಧರರು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರನ್ನು ಆಯ್ಕೆ ಮಾಡಿದ್ದು, 2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ನಮ್ಮ ಪಕ್ಷದ ಪರ ನಿಂತಿದ್ದು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದಲ್ಲಿ ಅಭೂತಪೂರ್ವ ಮುನ್ನಡೆಯನ್ನು ಕೊಟ್ಟಿದ್ದಾರೆ. ಗೆಲುವು ಸಾಧಿಸಿದ ಮಧು ಮಾದೇಗೌಡರಿಗೆ ಮತ್ತು ಅವರನ್ನು ಆಯ್ಕೆ ಮಾಡಿದ ಮತದಾರರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ಪಕ್ಷ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದು, ಹಾಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಸುಶಿಕ್ಷಿತ ಮತದಾರರು ಕೈ ಹಿಡಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪದವೀಧರರ ಹಲವು ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಮಧು ಮಾದೇಗೌಡರು ಧ್ವನಿ ಎತ್ತಲಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇನ್ನು ಹೊಸ ಶೆಕೆ ಪ್ರಾರಂಭವಾಗಲಿದೆ.
ಈ ಯಶಸ್ಸಿಗೆ ಕಾರಣರಾದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ್ ರವರು, ಕೆಪಿಸಿಸಿ ವಕ್ತಾರರಾದ ಚೆಲುವರಾಯಸ್ವಾಮಿ ಅವರು ಸೇರಿದಂತೆ ಇನ್ನಿತರ ನಾಯಕರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.