Friday, September 20, 2024

ಪ್ರಾಯೋಗಿಕ ಆವೃತ್ತಿ

ದುಬಾರಿ ವಸ್ತುಗಳ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮರಿಬ್ಬರ ಬಂಧನ

ವರದಿ:ಪ್ರಭು ವಿ.ಎಸ್. ಮದ್ದೂರು

ಮೊಬೈಲ್ ಸೇರಿದಂತೆ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನುಆನ್ ಲೈನ್ ಮೂಲಕ ಆರ್ಡರ್ ಮಾಡೋದು, ವಿತರಣೆ ಮಾಡುವ ವೇಳೆ ದುಬಾರಿ ವಸ್ತುಗಳನ್ನು ಕಿತ್ತು ಕೊಂಡು ಪರಾರಿಯಾಗುತ್ತಿದ್ದ ಖದೀಮರಿಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಮದ್ದೂರು ಪೋಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.

ಮೈಸೂರು ಮೂಲದ ಕೃಷ್ಣ ( 22) ಮತ್ತು ಚಿರಾಗ್ ( 22) ಎಂಬ ಇಬ್ಬರು ಯುವಕರು ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಸೂರಜ್ ಗೌಡ ಎಂಬ ಹೆಸರಿನಲ್ಲಿ ನಕಲಿ ಸಿಮ್ ಖರೀದಿ ಮಾಡಿದ್ದಾರೆ. ಪೇ ಅಂಡ್ ಡೆಲಿವರಿ ಮೂಲಕ ಆನ್ ಲೈನ್ ನಲ್ಲಿ ಹೊಸ ಮೊಬೈಲ್ ಅನ್ನು ಬುಕ್ ಮಾಡಿದ್ದಾರೆ.ಆ ಸಂಸ್ಥೆಯ ಸಿಬ್ಬಂದಿ ವೆಂಕಟಾಚಲ ಅವರು ಮೊಬೈಲ್ ವಿತರಣೆ ಮಾಡಲು ಸೋಮನಹಳ್ಳಿಗೆ ಬಂದು ಪೋನ್ ಮಾಡಿದ್ದಾರೆ.

ಆಗ ಕೃಷ್ಣ ಮತ್ತು ಚಿರಾಗ್ ಎಂಬ ಇಬ್ಬರೂ ಮೊಬೈಲ್ ವಿತರಣೆ ಮಾಡಲು ಬಂದಿದ್ದ ವೆಂಕಟಾಚಲ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಮದ್ದೂರು ಪಟ್ಟಣದ ಕಡೆಗೆ ಪರಾರಿಯಾಗಿದ್ದಾರೆ.

ತಕ್ಷಣವೇ ವೆಂಕಟಾಚಲ ಅವರು ಪೋಲೀಸ್ ಠಾಣೆಗೆ ಪೋನ್ ಮಾಡಿ ಆರೋಪಿಗಳು ಹಣ ನೀಡದೆ ಮೊಬೈಲ್ ಕಿತ್ತುಕೊಂಡು ಪರಾರಯಾದ ಕೃತ್ಯದ ಬಗ್ಗೆ ತಿಳಿಸಿದ್ದಾರೆ.

ತಕ್ಷಣವೇ ಕಾರ್ಯಾಚರಣೆಗೆ ಇಳಿದ ಮದ್ದೂರು ಪೋಲೀಸ್ ಠಾಣೆಯ ವೃತ್ತ ನಿರಿಕ್ಷಕ ಎಸ್.ಸಂತೋಷ್ ಮತ್ತು ಸಿಬ್ಬಂದಿಗಳ ತಂಡ ಪಟ್ಟಣದ ವ್ಯಾಪ್ತಿಯ ರಾಷ್ಟ್ರೀಯ,ರಾಜ್ಯ ಹೆದ್ದಾರಿಗಳಲ್ಲಿ ಆರೋಪಿಗಳ ಪತ್ತೆಗಾಗಿ ನಾಕಾಬಂಧಿ ಹಾಕಿದ್ದಾರೆ.

ಸೋಮನಹಳ್ಳಿ ಗ್ರಾಮದಿಂದ ಮದ್ದೂರು ಪಟ್ಟಣದ ಮೂಲಕ ಮಳವಳ್ಳಿ ರಸ್ತೆಯ ಉಪ್ಪಿನಕೆರೆ ಗೇಟ್ ಬಳಿ ಆರೋಪಿಗಳು ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿರುವುದನ್ನು, ಗಮನಿಸಿದ ಪೋಲೀಸರು ನಾಕಾಬಂಧಿ ಹಾಕಿ ತಡೆಯಲು ಯತ್ನಿಸುತ್ತಿದ್ದಾರೆ.ಆದರೆ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಅತಿ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಇದೇ ವೇಳೆ ಆರೋಪಿಗಳನ್ನು ಹಿಡಿಯಲು ಹೋದ ಮದ್ದೂರು ಪೋಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಉಮೇಶ್ ಅವರ ಕೈಗೆ ಗಾಯವಾಗಿದೆ. ಗಾಯವನ್ನು ಸಹ ಲೆಕ್ಕಿಸದೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪಟ್ಟಣ ಪೋಲೀಸ್ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಆರೋಪಿಗಳಿಂದ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಇದೇ ರೀತಿ ಶ್ರೀರಂಗಪಟ್ಟಣದಲ್ಲಿ ಬ್ರಾಂಡೆಡ್ ಶೂಗಳು ಹಾಗೂ ಮೈಸೂರಿನಲ್ಲಿ ಸ್ವಿಗ್ಗಿ ಆನ್ ಲೈನ್ ನಲ್ಲಿ ದುಬಾರಿ ಬೆಲೆಯ ಆಹಾರ ಹಾಗೂ ಹಲವಾರು ವಸ್ತುಗಳನ್ನು ಬುಕ್ ಮಾಡಿ ವಿತರಣೆ ಮಾಡುವ ಸಂದರ್ಭದಲ್ಲಿ ಹಣ ನೀಡದೆ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಕೂಡ ಪೋಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಮದ್ದೂರು ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಮದ್ದೂರು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ.ಕಿರಣ್ ಅವರ ಮುಂದೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!