ದಲಿತ ಸಮುದಾಯಕ್ಕೆ ಸರ್ಕಾರದ ಮಟ್ಟದಲ್ಲಿ ಸಿಗುವ ಹಲವು ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.
ಕೆ ಆರ್ ಪೇಟೆ ಪಟ್ಟಣದ ಸಮುದಾಯದ ಭವನದಲ್ಲಿ ನಡೆದ ದಲಿತ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಮಹಿಳೆಯರು ಒಗ್ಗೂಡಿ ಸಂಘಟಿತರಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರಬೇಕು. ನನಗೆ ಯಾವುದೇ ಜಾತಿ ಮತ ಬೇಧವಿಲ್ಲ. ಎಲ್ಲಾ ಸಮುದಾಯದ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯವಾಗಿ ನನಗೆ ದಲಿತ ಸಮುದಾಯ ಶಕ್ತಿಯನ್ನು ತುಂಬಿದೆ. ದಲಿತರ ಬಹುಬೇಡಿಕೆಯಾದ ಪಟ್ಟಣದ ಹೃದಯ ಭಾಗದ ಪುರಸಭಾ ಮೈದಾನದಲ್ಲಿ ನೂತನವಾಗಿ ಅಂಬೇಡ್ಕರ್ ಸಮುದಾಯ ಭವನ ಹಾಗೂ ಬಾಬು ಜಗನ್ ಜೀವನ್ ರಾಂ ಸಮುದಾಯ ಭವನವನ್ನು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಪ್ರಗತಿ ಹಂತದಲ್ಲಿದೆ ಎಂದರು.
ಸಮಾಜ ಸೇವಕ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ದಲಿತ ಸಮುದಾಯದ ಮಹಿಳೆಯರು ಜಾಗೃತರಾಗದಿದ್ದರೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ಮಹಿಸುವ ಮಹಿಳೆಯರು ಮೊದಲು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವು ಸಿಗುವಂತೆ ನೋಡಿಕೊಳ್ಳಬೇಕೆಂದರು.
ಲೋಕ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಎಂ ಎಸ್ ಜಗನ್ನಾಥ್ ಮಾತನಾಡಿ, ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ದೇಶದಲ್ಲಿ ಜನ್ಮ ತಾಳದಿದ್ದರೆ ದಲಿತರ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿತ್ತು. ಭಾರತ ದೇಶಕ್ಕೆ ಸಂವಿಧಾನವನ್ನು ಬರೆದು ಎಲ್ಲಾ ಸಮುದಾಯಕ್ಕೆ ನ್ಯಾಯ ಸಿಗುವಂತೆ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಂತರಾಜೇಗೌಡ, ಹಸಿರು ಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ಮೈನಾವತಿ, ಪುರಸಭಾ ಸದಸ್ಯರಾದ ಪ್ರೇಂಕುಮಾರ್, ಅಂಬೇಡ್ಕರ್ ನಗರ ಮಹೇಶ್, ರವೀಂದ್ರ ಬಾಬು, ಕಮಲಾಕ್ಷಿ ನಾಗರಾಜು, ರವಿ ಶಿವಕುಮಾರ್, ಚನ್ನಮ್ಮ, ಸರಸ್ವತಿ, ಸರೋಜಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.




