ನ್ಯಾಯಾಲಯದ ಆದೇಶದಂತೆ ವ್ಯಕ್ತಿಯೊಬ್ಬನಿಗೆ ಸಿಗಬೇಕಾದ ಜಮೀನಿನಲ್ಲಿ ವಸತಿಗಳು,ರಸ್ತೆ ಇದೆಯೆಂದು ಹೈಕೋರ್ಟ್ ಗೆ ಸುಳ್ಳು ವರದಿ ನೀಡಿ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ನಗರದ ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಳೆದ 8 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ಪೂಜಾರಿ ಸಣ್ಣಯ್ಯನವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, 1978-79 ರಲ್ಲಿ ಕೆ.ಆರ್.ಪೇಟೆ ತಾಲೂಕಿನ ಹರಿಗನನಹಳ್ಳಿ ಗ್ರಾಮದ ಪೂಜಾರಿ ಸಣ್ಣಯ್ಯ ಅವರಿಗೆ ಎರಡು ಎಕರೆ ಜಮೀನು ದರಖಾಸ್ತು ಮೂಲಕ ಮಂಜೂರು ಮಾಡಲಾಗಿತ್ತು.ಆದರೆ ಅವರ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿತ್ತು.
ಈ ಬಗ್ಗೆ ಶಿವಣ್ಣ ಪಿಟಿಸಿಎಲ್ ಕಾಯ್ದೆ ಅಡಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ 1994-99ರಲ್ಲಿ ಪೂಜಾರಿ ಸಣ್ಣಯ್ಯನವರ ಕುಟುಂಬಕ್ಕೆ ಆರ್.ಟಿ.ಸಿ. ನೀಡಿತ್ತು. ಅದರಲ್ಲಿ 72 ತೆಂಗಿನಮರ, ಒಂದು ಪಂಪ್ ಸೆಟ್ ನಮೂದಾಗಿರುತ್ತದೆ. ಇಷ್ಟಾದರೂ ಅವರಿಗೆ ಜಮೀನು ಕೊಡುವುದಿಲ್ಲ. ಶಿವಣ್ಣನವರು ತಮ್ಮ ಜಮೀನು ಉಳುಮೆ ಮಾಡಲು ಹೋದಾಗ ಕೃಷ್ಣೇಗೌಡ ಎಂಬಾತ ಶಿವಣ್ಣನ ಮೇಲೆ ಹಲ್ಲೆ ಮಾಡಿಸಿ ಗ್ರಾಮ ತೊರೆಯುವಂತೆ ಮಾಡುತ್ತಾರೆ.
ಎಲ್ಲ ಅಧಿಕಾರಿಗಳಿಗೂ ಅರ್ಜಿ ಕೊಟ್ಟು ಸಾಕಾದ ಶಿವಣ್ಣ ಕೊನೆಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ ಹೈಕೋರ್ಟ್ ಕೂಡಲೇ ಪೂಜಾರಿ ಸಣ್ಣಯ್ಯನವರ ಜಮೀನನ್ನು ಹದ್ದುಬಸ್ತು ಮಾಡಿಸಿ ಸ್ವಾಧೀನಕ್ಕೆ ಕೊಡಿ ಎಂದು ಹೇಳುತ್ತದೆ.
ಆದರೆ ತಹಶೀಲ್ದಾರ್ ಶಿವಮೂರ್ತಿ ಸರ್ಕಾರಕ್ಕೆ ಆ ಜಮೀನಿನಲ್ಲಿ ಈಗಾಗಲೇ ವಸತಿಗಳಿವೆ, ರಸ್ತೆಯಿದೆ ಎಂದು ಸುಳ್ಳು ಮಾಹಿತಿ ಕೊಡುತ್ತಾರೆ ಆದರೆ ಹೈಕೋರ್ಟ್ ಮೂಲ ನಕಾಶೆಯಂತೆ ಸರ್ವೆ ನಂ.8 ಅನ್ನು ಮತ್ತೆ ಸರ್ವೆ ಮಾಡಿ ಶಿವಣ್ಣನವರಿಗೆ ಸ್ವಾಧೀನ ಕೊಡಿಸಿ ಎಂದು ಆದೇಶಿಸುತ್ತದೆ. ಆದರಂತೆ ಈಗಿನ ತಹಶೀಲ್ದಾರ್ ರೂಪ ಅವರು ಕೂಡ ಸರ್ಕಾರಕ್ಕೆ ಸುಳ್ಳು ವರದಿಯನ್ನು ಕೊಟ್ಟು ದಲಿತ ಸಮುದಾಯದ ಶಿವಣ್ಣನಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಎಂಟು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ದಲಿತ ಸಮುದಾಯದ ವ್ಯಕ್ತಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಆತನ ಅಹವಾಲು ಕೇಳಿಲ್ಲ ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದರೂ ಜಿಲ್ಲಾಧಿಕಾರಿಗಳು ಮಾತನಾಡಿಲ್ಲ ಎಂದರೆ ಜಿಲ್ಲಾಡಳಿತ ಸತ್ತಿದೆಯೋ, ಬದುಕಿದೆಯೋ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ತಪ್ಪು ಮಾಹಿತಿ ನೀಡಿರುವ ತಹಶೀಲ್ದಾರ್ ಗಳಾದ ಶಿವಮೂರ್ತಿ, ರೂಪ ಹಾಗೂ ಭೂ ದಾಖಲೆ ಸಹಾಯಕ ನಿರ್ದೇಶಕರ ಪರಶಿವ ನಾಯಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಮೀನು ಕಳೆದುಕೊಂಡ ರೈತ ಶಿವಣ್ಣ, ದಸಂಸ ಸಂಘಟನೆಯ ರವಿಚಂದ್ರನ್, ಪ್ರಸನ್ನ ದೇವರಾಜು ಮತ್ತಿತರರಿದ್ದರು.