Thursday, July 25, 2024

ಪ್ರಾಯೋಗಿಕ ಆವೃತ್ತಿ

ನನ್ನ ದುಡಿಮೆಗೆ ಕ್ಷೇತ್ರದ ಜನರು ಶಕ್ತಿಯಾಗಿ ನಿಲ್ಲಬೇಕು: ನರೇಂದ್ರಸ್ವಾಮಿ

ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಲು ಶ್ರಮಿಸುತ್ತಿದ್ದು, ನನ್ನ ದುಡಿಮೆಗೆ ಕ್ಷೇತ್ರದ ಜನರು ಶಕ್ತಿಯಾಗಿ ನಿಲ್ಲಬೇಕೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಹಿತಕಾಯಲು ಎಂದಿಗೂ ಬದ್ದನಾಗಿರುತ್ತೇನೆ, ತಾಲ್ಲೂಕಿನ ಎಲ್ಲಾ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಿದ್ದೇನೆ, ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ, ನೇರ ನುಡಿಯ ಮೂಲಕವೇ ಉತ್ತರ ಕೊಡುತ್ತೇನೆ ಹೊರತು ಗುಲಾಮಗಿರಿ ರಾಜಕಾರಣ ಎಂದಿಗೂ ಮಾಡುವುದಿಲ್ಲ ಎಂದರು.

ಕ್ಷೇತ್ರದಲ್ಲಿ ಗುಂಡಾಗಿರಿ, ದಬ್ಬಾಳಿಕೆಗೆಗಳಿಗೆ ಎಂದಿಗೂ ಅವಕಾಶ ಕೊಡುವುದಿಲ್ಲ, ನಾನು ಎಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತಾನೋ ಅಲ್ಲಿಯವರೆವಿಗೂ ಪ್ರಾಮಾಣಿಕ ಆಡಳಿತವಿರಬೇಕು, ಕಾನೂನು ಮತ್ತು ಸಂವಿಧಾನ ಬದ್ದವಾಗಿ ದೇಶ ನಡೆಯುವ ರೀತಿಯಲ್ಲಿ ಮಳವಳ್ಳಿಯಲ್ಲಿಯಲ್ಲಿಯೂ ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ವಿವಿಧ ಇಲಾಖೆಗಳಿಂದ ಬರುವ ಸವಲತ್ತುಗಳು ಕೊರತೆ ಇರುವ ಸಂದರ್ಭದಲ್ಲಿ ಜನರ ಬವಣೆಯನ್ನು ಬದಲಾವಣೆ ಮಾಡಲು ಹೆಚ್ಚಿನ ಸೌಲಭ್ಯ ತರುವುದೇ ನಾಯಕತ್ವದ ಶಕ್ತಿಯಾಗಿದೆ, ಹೋರಾಟದ ಮೂಲಕ ಕ್ಷೇತ್ರಕ್ಕೆ ಬೇಕಾದ ಸೌಲಭ್ಯಗಳನ್ನು ಹೊದಗಿಸುತ್ತಿದ್ದೇನೆಂದು ತಿಳಿಸಿದರು.

ಮುಂದಿನ ಒಂದೂವರೆ ವರ್ಷದೊಳಗೆ ಕ್ಷೇತ್ರದ ಎಲ್ಲರಿಗೂ ಕುಡಿಯಲು ಶುದ್ಧ ಕಾವೇರಿ ನೀರು ಒದಗಿಸಲು ಹಲವಾರು ಯೋಜನೆಗಳು ಜಾರಿಯಾಗಲಿವೆ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುದಾನ ಕೊರತೆಯಾಗದಂತೆ ಆಡಳಿತ ನಡೆಸಲಾಗುತ್ತಿದೆ. ನಾವು ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ, ಬೇರೆಯವರ ರೀತಿ ಸುಳ್ಳು ಘೋಷಣೆ ಮಾಡಿ, ಅನುದಾನ ಕೊಟ್ಟು ಕಿತ್ತುಕೊಳ್ಳುವುದಿಲ್ಲ, ನಮ್ಮ ಸರ್ಕಾರ ಅನುದಾನದ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೂ ಲೋಕ ಸಭೆಯಲ್ಲಿ ಕೈ ಹಿಡಿಯಲ್ಲಿಲ್ಲ, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ಎದುರಾಗುತ್ತಿರುವುದರಿಂದ ಮತದಾರರು ತಾವೇ ಆತ್ಮವಲೋಕನ ಮಾಡಿಕೊಂಡು ಯೋಗ್ಯರಿಗೆ ಅರ್ಶಿವಾದ ಮಾಡಬೇಕೆಂದು ಕೋರಿದರು.

ಗ್ರಾ.ಪಂ ಅಧ್ಯಕ್ಷ ಚನ್ನಿಗರಾಮು ಮಾತನಾಡಿ, ಗ್ರಾ.ಪಂ ವತಿಯಿಂದ ನೀಡಲಾಗುವ ಇ. ಸೊತ್ತು ಸೇರಿದಂತೆ ಇತರೆ ದಾಖಲೆಗಳನ್ನು ಯಾವುದೇ ಸಾರ್ವಜನಿಕರಿಗೆ ಯಾವುದೇ ಪ್ರತಿ ಫಲಪೇಕ್ಷೆ ಇಲ್ಲದೇ ಪ್ರಮಾಣಿಕವಾಗಿ ನೀಡಲಾಗುತ್ತಿದೆ, ಗ್ರಾ,ಪಂ ವ್ಯಾಪ್ತಿಯ ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಹೊದಗಿಸಲು ಪಂಚಾಯಿತಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ, ಶಾಸಕರು ಕಂದೇಗಾಲ ಗ್ರಾಮದ ಅಭಿವೃದ್ದಿಗೆ ಕೊಟ್ಯಾಂತರ ರೂ ಹಣ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಲಿದ್ದಾರೆಂದರು

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಎಲ್.ಮಮತಾ, ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಸುನೀತಾ, ರಾಧಾ, ಜವರಾಯಿಶೆಟ್ಟಿ, ಗೌರಮ್ಮ, ಚಿಕ್ಕಹೈದೇಗೌಡ, ಪುಟ್ಟರಾಜು, ಜಯಮ್ಮ, ಭಾಗಮ್ಮ, ಸಿದ್ದರಾಜೇ ಅರಸು, ಗೌರಮ್ಮ, ಆರೋಗ್ಯಾಧಿಕಾರಿ ಡಾ.ಸುರೇಶ್, ಪಿಡಿಒ ಎನ್.ನವೀನ್ ಕುಮಾರ್, ತಾ.ಪಂ.ಯ ಎಸ್.ಆರ್.ಅಖಿಲಾಂಭಿಕೆ, ಕೆ.ಸುಹಾಸ್, ಪಾರ್ಥಸಾರಥಿ, ಸೇವಾ ಕೇಂದ್ರ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಮುತ್ತುರಾಯಪ್ಪ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!