Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಕೆ.ಸಿದ್ದಯ್ಯಗೆ ಬೀಳ್ಕೊಡುಗೆ

ಸಮುದಾಯದ ಅಭಿವೃದ್ದಿಗಾಗಿ ನಿಗಮ ಕೊಟ್ಟ ಗುರಿಗಳನ್ನು ಬಾಕಿ ಉಳಿಸದೇ ತಮ್ಮ ಕರ್ತವ್ಯ ಅವಧಿಯಲ್ಲಿ ಕೆ.ಸಿದ್ದಯ್ಯ ಸಾಧಿಸಿದ್ದಾರೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಭಾಗೀಯ ಕಚೇರಿಯ ಸಹಾಯಕ ಉಪ ವ್ಯವಸ್ಥಾಪಕ ಮೂರ್ತಿ ತಿಳಿಸಿದರು.

ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯಲ್ಲಿ ನಡೆದ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ.ಸಿದ್ದಯ್ಯ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕು ಅಭಿವೃದ್ದಿ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತರಾದ ಕೆ.ಸಿದ್ದಯ್ಯ ಮಾತನಾಡಿ, 1988 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನನ್ನ ಸೇವಾ ಜೀವನ ಆರಂಭಿಸಿದೆ. ನಂತರದ ದಿನಗಳಲ್ಲಿ ಕೋಲಾರ, ಮೈಸೂರು, ರಾಮನಗರ, ರಾಮನಗರ, ಬೆಂಗಳೂರು ಕೇಂದ್ರ ಕಚೇರಿ ಸೇರಿದಂತೆ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಗ್ರಾಮೀಣ ಭಾಗದ ಜನಸಾಮಾನ್ಯರ ಅಭಿವೃದ್ಧಿಗೆ ಸೇವೆ ಮಾಡಿರುವುದು ಬಹಳ ಖುಷಿ ತಂದಿದೆ. ಮಳವಳ್ಳಿ ತಾಲೂಕಿನ ಅಂತರವಳ್ಳಿ ಗ್ರಾಮದ ನಾನು ನಮ್ಮ ಜಿಲ್ಲೆಯಲ್ಲಿ ನಿವೃತ್ತಿ ಹೊಂದಿರುವುದು ಖುಷಿಯ ವಿಚಾರ. ಕರ್ತವ್ಯದ ಸಮಯದಲ್ಲಿ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸುವೆ ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ ಮಾತನಾಡಿ, ಕರ್ತವ್ಯದಲ್ಲಿ ದಕ್ಷತೆಯಿಂದ ಕೆಲಸ ಮಾಡುವ ಕೆ.ಸಿದ್ದಯ್ಯ ಅವರ ಗುಣಗಳು ಮುಂದಿನ ಪೀಳಿಗೆಯ ತಲೆಮಾರಿಗೂ ಲಭಿಸಲಿ. ನಿಗಮದಲ್ಲಿ ಇಂತಹ ನೌಕರರು ಸಿಕ್ಕಾಗ ಯೋಜನೆಗಳನ್ನು ಫಲಾನಿಭವಿಗಳಿಗೆ ತಲುಪಿಸುವ ಜೊತೆಗೆ ಸಮುದಾಯಗಳ ಅಭಿವೃದ್ಧಿ ತ್ವರಿತಗತಿಯಲ್ಲಿ ಸಾಗುವುದು ಖಚಿತ. ನಿಗಮ ಕೊಟ್ಟ ಗುರಿಗಳನ್ನು ಬಾಕಿ ಉಳಿಸದೇ ತಮ್ಮ ಕರ್ತವ್ಯ ಅವಧಿಯಲ್ಲಿ ಸಾಧಿಸಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ, ಚಂದ್ರಕಾಂತ್, ಮೂರ್ತಿ, ಅಂತರವಳ್ಳಿ ಎಂ.ಶಿವಣ್ಣ, ಲಿಂಗಣ್ಣ, ತಾಲೂಕು ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ವಿನೋದ್ ಕುಮಾರ್, ಕೃಷ್ಣಪ್ಪ, ಮುಖಂಡರಾದ ಪ್ರಾಣೇಶ್, ಸಿದ್ದರಾಜು, ಶಿವಯ್ಯ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ