ವೈದ್ಯ ವೃತ್ತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಮತ್ತು ಮಾನವೀಯತೆಯನ್ನು ಮೆರೆಯುವ ಸೇವಾ ವೃತ್ತಿಯಾಗಿದೆ ಎಂದು ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ ಹನುಮಂತು ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಕೊಪ್ಪ ಇವರು ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಮತ್ತು ಡಾ.ಬಿ.ಸಿ ರಾಯ್ ಪ್ರಶಸ್ತಿ ಪ್ರದಾನ ಹಾಗೂ ಬಿ.ಸಿ ರಾಯ್ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯ ವೃತ್ತಿಯು ರೋಗಿಗಳ ಗುಣಮುಖ ಪಡಿಸುವ ಅತ್ಯಂತ ಶ್ರೇಷ್ಠ ಸೇವಾ ವೃತ್ತಿಯಾಗಿದೆ, ಮನವೀಯತೆಯುಳ್ಳ ವೈದ್ಯರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ವೈದ್ಯರು ಇಲ್ಲದ ಲೋಕವನ್ನು ಖಂಡಿತ ಊಹಿಸುವುದಕ್ಕೂ ಸಾಧ್ಯವಿಲ್ಲ, ಇಂತಹ ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದರು ಸಾಲದು, ಹೀಗಾಗಿ ಕಣ್ಣಿಗೆ ಕಾಣುವ ದೇವರಿಗೆ ಧನ್ಯವಾದ ಹೇಳಲು ಮೀಸಲಾಗಿರುವ ದಿನವೇ ರಾಷ್ಟ್ರೀಯ ವೈದ್ಯ ದಿನ ಎಂದು ಹೇಳಿದರು.
ವೈದ್ಯ ವೈರಿಯಲ್ಲ, ಜನರ ಆರೋಗ್ಯಕ್ಕಾಗಿ ಸದಾ ಶ್ರಮಿಸುವ ಸ್ನೇಹಿತ, ಕರುಣಾಮಯಿ, ರೋಗಿಗಳಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಕೊಲ್ಕತ್ತಾದ ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ತುಳಿದು ರೋಗಿಗಳ ಮನೆ ಬಾಗಿಲಿಗೆ ಎಡತಾಕಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಡಾ.ಬಿ ಎಸ್ ರಾಯ್ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಡಳಿತ ವೈದ್ಯಾಧಿಕಾರಿ ಡಾ ಡಿ.ಟಿ ಮಂಜುನಾಥ್, ಅರವಳಿಕೆ ತಜ್ಞ ಡಾ. ಎನ್ ತ್ಯಾಗರಾಜು, ಪ್ರಸೂತಿ ತಜ್ಞೆ ಡಾ ಎಂ.ಸವಿತಾ, ಮಕ್ಕಳ ರೋಗಗಳ ತಜ್ಞ ಡಾ. ಸಿ.ಎಂ ಶ್ರೀಧರ್, ದಂತ ರೋಗಗಳ ತಜ್ಞ ಡಾ. ಆರ್ ಜಿ ಅನುಪಮಾ ಇವರಿಗೆ ಡಾ. ಬಿ.ಸಿ ರಾಯ್ ಪ್ರಶಸ್ತಿ ಪ್ರದಾನ ಮಾಡಿ ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಕೆಂಪೇಗೌಡ, ಕೃಷಿಕ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ರಕ್ಷಿತ್ ರಾಜು , ದಿಲೀಪ್, ವೀರಪ್ಪ ಕೀಲಾರ, ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.




