Tuesday, September 17, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ| ಬನ್ನೂರು ರೈತ ಮುಖಂಡರಿಂದ ಸರದಿ ಉಪವಾಸ

ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕರ್ನಾಟಕದ ಹಿತ ಕಾಪಾಡಲು ಮುಂದಾಗದ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸರದಿ ಉಪವಾಸಕ್ಕೆ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಮೈಸೂರು ಜಿಲ್ಲೆ ಬನ್ನೂರು ಘಟಕದ ಮುಖಂಡರು ಮಂಗಳವಾರ ಬೆಂಬಲ ಸೂಚಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ 11ನೇ ದಿನದ ಸರದಿ ಉಪವಾಸದಲ್ಲಿ ರೈತ ಮುಖಂಡರಾದ ಬನ್ನೂರಿನ ನಾರಾಯಣ್, ಜಯರಾಮೇಗೌಡ,ರಾಜು, ಪಾರ್ಥ, ಎಂ.ವಿ ಕೃಷ್ಣಪ್ಪ, ಸಿಹಳ್ಳಿ ರವಿ, ರಂಗಸ್ವಾಮಿ ಮೇಗಲ ಕೊಪ್ಪಲು, ತಮ್ಮಯ್ಯ ಯಾಚೇನಹಳ್ಳಿ,ಶಿವರಾಮು ಬಿ ಬೆಟ್ಟಹಳ್ಳಿ ಭಾಗಿಯಾಗಿದ್ದರು.

ಕೃಷ್ಣರಾಜಸಾಗರದಿಂದ ನಿರಂತರವಾಗಿ ನೀರು ಹರಿಸಿದ ಕರ್ನಾಟಕ ಸರ್ಕಾರ ಜಲಾಶಯಗಳನ್ನು ಬರಿದುಮಾಡಿದ್ದು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಿದ್ದೇವೆ ಎಂದು ಪ್ರಮಾಣ ಪತ್ರ ನೀಡಲಾಗಿದೆ, ಸರ್ಕಾರದ ಇಂತಹ ನಡೆಯನ್ನು ಖಂಡಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ. ಕಾವೇರಿ ಚಳವಳಿ 92ನೇ ದಿನಕ್ಕೆ ಕಾಲಿಟ್ಟಿದೆ, ಆದರೂ ಸಹ ಆಳುವ ಸರ್ಕಾರ ನಿರ್ಲಕ್ಷ್ಯ ವಹಿಸಿದೆ, ತಮಿಳುನಾಡು ಸರ್ಕಾರ ಹಠಮಾರಿ ಧೋರಣೆ ಅನುಸರಿಸಿ ನೀರು ಪಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿ ಆದೇಶ ಪಾಲನೆ ಮಾಡಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿರುವುದು ಸರಿಯಲ್ಲ, ರಾಜ್ಯಸಭೆಯಲ್ಲಿ ತಮಿಳುನಾಡಿನ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಜಲ ಶಕ್ತಿ ಇಲಾಖೆಯ ಸಚಿವರು, ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶದಂತೆ ನೀರು ಹರಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರು ಹರಿದಿರುವ ಪ್ರಮಾಣವನ್ನು ದಿನಕ್ಕೆರಡು ಬಾರಿ ವರದಿ ಸರ್ಕಾರಗಳಿಗೆ ತಲುಪುತ್ತದೆ, ಆದರೂ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಬೇಕಾದ ಅಗತ್ಯ ಏನಿತ್ತು, ಕರ್ನಾಟಕ ಸರ್ಕಾರ ಕಾವೇರಿ ವಿಚಾರದಲ್ಲಿ ಪ್ರತಿ ಬಾರಿ ಎಡವುತ್ತಿದೆ ಎಂದು ಆರೋಪಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್ ಎಸ್ ನಾರಾಯಣ್, ದಸಂಸ ಎಂ ವಿ ಕೃಷ್ಣ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!