Tuesday, November 24, 2026

ಪ್ರಾಯೋಗಿಕ ಆವೃತ್ತಿ

ಇಲ್ಲಿ ಯಾವಾಗಲೂ ನರಳುವವರು ಜನಸಾಮಾನ್ಯರು ಮಾತ್ರ…..

ಪ್ರಿಯ ಜಿಲ್ಲಾಧಿಕಾರಿಗಳೇ..

ನೀವು ನಮ್ಮನ್ನು ಕವಿಗಳೆಂದು ಕರೆಯುತ್ತೀರಿ, ಕಲಾವಿದರು ಅನ್ನುತ್ತೀರಿ, ಅದ್ಭುತ ಹಾಡುಗಾರರು ಎಂದು ಹಾಡಿ ಹೊಗಳುತ್ತೀರಿ. ಧನ್ಯವಾದಗಳು. ಇವೆಲ್ಲವೂ ನಾವು ಹೊಟ್ಟೆಪಾಡಿಗಾಗಿ, ನಮ್ಮ ಆತ್ಮತೃಪ್ತಿಗಾಗಿ ಕಂಡುಕೊಂಡ ಮಾರ್ಗಗಳು. ಆದರೆ, ಇದೆಲ್ಲದಕ್ಕಿಂತ ಮೊದಲು ನಾವು ಹಳ್ಳಿಗಳಿಂದ ಬಂದವರು. ರೈತ ಸಾಯುತ್ತಿರುವಾಗ ನಾವು ಸುಮ್ಮನೆ ಬಾಯಿ ಮುಚ್ಚಿಕೊಂಡು ಕೂತಿರಬೇಕೆಂದು ನೀವು ಬಯಸುತ್ತಿದ್ದೀರಿ.

ನಮ್ಮ ಪ್ರತಿಧ್ವನಿ ಜಿಲ್ಲಾಧಿಕಾರಿಗಳ ಮೇಲೋ,ಜಿಲ್ಲಾ ಉಸ್ತುವಾರಿ ಸಚಿವರ ಮೇಲೋ ಅಲ್ಲ. ನಮಗೆ ನಿಮ್ಮ ಬಗ್ಗೆ ಯಾವ ಕೋಪವೂ ಇಲ್ಲ. ಒಳಿತು ಮಾಡಲಾಗದ ನಿಮ್ಮ ಅಸಹಾಯಕತೆಯ ಕುರಿತು ಅನುಕಂಪವಿದೆ. “ಇಲ್ಲ! ನನಗಿಲ್ಲಿ ಯಾವ ನಂಬಿಕೆಗಳೂ ಉಳಿದಿಲ್ಲ” ಎನ್ನುತ್ತಾ ರೈತನೊಬ್ಬ ಈ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲಾಗದೆ ನಿಮ್ಮದೇ ಆಫೀಸಿನ ಆವರಣದಲ್ಲೇ ಪೆಟ್ರೋಲ್ ಸುರಿದುಕೊಂಡು ತನ್ನ ದೇಹಕ್ಕೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಾನಲ್ಲ, ಆ ಕ್ರೂರ ವ್ಯವಸ್ಥೆಯ ವಿರುದ್ಧ ನಮ್ಮ ಪ್ರತಿರೋಧ ಎಂಬುದನ್ನು ನೀವೆಲ್ಲ ಅರ್ಥೈಸಿಕೊಳ್ಳಬೇಕಿದೆ.

ಈ ಸಂದರ್ಭದಲ್ಲಿ ಪಿ.ಲಂಕೇಶರು ಹೇಳುತ್ತಿದ್ದ ಮಾತೊಂದು ನೆನಪಾಗುತ್ತಿದೆ “ಅಧಿಕಾರಶಾಹಿ, ಆಳುವ ವರ್ಗ ಯಾವಾಗಲೂ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮತ್ತು ವಾಸ್ತವವನ್ನು ಮರೆಮಾಚಿ ಜನರನ್ನು ರಂಜಿಸಿ, ವಂಚಿಸಲು ನೋಡುತ್ತಿರುತ್ತದೆ. ಇಲ್ಲಿ ಯಾವಾಗಲೂ ನರಳುವವರು ಜನಸಾಮಾನ್ಯರು ಮಾತ್ರ” ಈ ಮಾತುಗಳೀಗ ನಿಜವಾಗುತ್ತಿವೆ. ನಿನ್ನೆ ಮಂಡ್ಯದಲ್ಲಿ ತನ್ನ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದೆ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದ ರೈತ ಮಂಜೇಗೌಡನದು ಒಂದು ಸಣ್ಣ ಉದಾಹರಣೆ. ಇಂಥ ಹತ್ತು ಹಲವು ತಬರನ ಕಥೆಗಳು ಮಂಡ್ಯ ಜಿಲ್ಲೆಯ ಅನೇಕ ಸರ್ಕಾರಿ ಕಚೇರಿಗಳಲ್ಲಿ ಚಾಲ್ತಿಯಲ್ಲಿವೆ.

ಹೃದಯ ಮುಟ್ಟಿಕೊಂಡು ನಿಮ್ಮ ಆತ್ಮಗಳನ್ನು ಕೇಳಿಕೊಳ್ಳಿ. ಮಂಡ್ಯದ ಸರ್ಕಾರಿ ಕಚೇರಿಗಳಲ್ಲಿ ಭಷ್ಟಾಚಾರ ಇಲ್ಲವೇ. ಹರಿದ ಬಟ್ಟೆಯವನು ಎಂಬ ಕಾರಣಕ್ಕೆ ಬಡ ರೈತನೊಬ್ಬ ಜಿಲ್ಲಾಧಿಕಾರಿಗಳನ್ನು ಕಾಣಲು ಸಾಧ್ಯವಾಗದೇ ಇರುವುದು ಸುಳ್ಳೇ? ಬದುಕುವ ಯಾವ ಭರವಸೆಯೂ ಇಲ್ಲದೆ ಬೆಂಕಿ ಹಚ್ಚಿಕೊಂಡು ಸತ್ತು ಹೋದ ರೈತ ನಿಮ್ಮ ಕೊಲೆಗಡುಕ ವ್ಯವಸ್ಥೆಯ ಅನಾವರಣ ಮಾಡಿದ್ದಾನೆ.

ಬದಲಾಗಿ, ಇನ್ನಾದರೂ ಸರ್ಕಾರಿ ಕಚೇರಿಗಳಲ್ಲಿ ನೀವೂ ಸೇರಿದಂತೆ ನಿಮ್ಮ ಅಧಿಕಾರಿಗಳು ಪ್ರತಿದಿನ ಸಂಜೆ ಒಂದು ತಾಸು ಬಡವರು,ರೈತರು ಮತ್ತು ಜನಸಾಮಾನ್ಯರ ಕಷ್ಟಸುಖಗಳನ್ನು ಆಲಿಸಿರಿ. ಮಾನವೀಯತೆ ಬೆಳೆಸಿಕೊಂಡು ದೇಶದ ಜನರಿಗೆಲ್ಲ ಆಹಾರ ನೀಡುವ ರೈತನಿಗೆ ಗೌರವ ಕೊಡಿ. ರೈತರನ್ನು ಬಲಿ ಪಡೆದು ನಾವು ಹೆಚ್ಚು ಕಾಲ ಬದುಕುಳಿಯಲಾರೆವು ಎಂಬ ವಾಸ್ತವ ಸತ್ಯ ಅರ್ಥ ಮಾಡಿಕೊಳ್ಳಿ.

-ಅರವಿಂದ ಪ್ರಭು, ಚಿತ್ರಕೂಟ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ