Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತ ದಿನಾಚರಣೆಯ ದಿನವೇ ರೈತನಾಯಕ ಕೆ. ಎಸ್. ಪುಟ್ಟಣ್ಣಯ್ಯ ಜನ್ಮದಿನ

✍️ ನ.ಲಿ. ಕೃಷ್ಣ ಕೃಷಿಕರು.


ದೇಶ ಇಂದು ರೈತ ದಿನಾಚರಣೆಯನ್ನು ಆಚರಿಸುತ್ತಿದೆ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು ದೇಶಾದ್ಯಂತ  ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ವಿಶೇಷ ಎಂದರೇ ಕೆ ಎಸ್ ಪುಟ್ಟಣ್ಣಯ್ಯ ಅವರು ರೈತ ದಿನಾಚರಣೆಯ ಈ ದಿನದಂದೆ ಜನಿಸಿದ್ದು ಇಂದು(ಡಿ.23) ಅವರ 75 ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ.  ಮೂಲತಃ ಕ್ರೀಡಾಪಟುವು ಆದ ಪುಟ್ಟಣ್ಣಯ್ಯ ಅವರ ಜನ್ಮದಿನವನ್ನು ಅವರ ಹುಟ್ಟೂರು ಕ್ಯಾತನಹಳ್ಳಿಯಲ್ಲಿ  ಜನ್ಮದಿನದ  ಪ್ರಯುಕ್ತ ಕ್ರೀಡಾಕೂಟ ಏರ್ಪಡಿಸಿ ಆಚರಿಸಲಾಗುತ್ತದೆ.

ಪುಟ್ಟಣ್ಣಯ್ಯ ಗರಡಿಮನೆಯಲ್ಲಿ ತನ್ನ ದೇಹ ಪಳಗಿಸಿ ಹುರಿಯಾಳಾಗಿ ಕ್ರೀಡಾ ಕ್ಷೇತ್ರದಿ ಹೆಸರು ಮಾಡಿದವರು.
ಕ್ಯಾತನಹಳ್ಳಿ ಕ್ರೀಡೆಗೆ ಹೆಸರಾದ ಊರು ಕೂಡ. ರೈತಾಪಿ ಜೀವನ ನಡೆಸುತ್ತಾ ಕಬ್ಬಿನಗಾಡಿ ಹೊಡೆಯುತ್ತಾ ಇದ್ದ ಪುಟ್ಟಣ್ಣಯ್ಯ ಪದವೀಧರರು ಹೌದು.

ಸೆಂಟ್ ಪಿಲೊಮಿನಾ ಶಾಲೆಯಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಬನುಮಯ್ಯ ಕಾಲೇಜಿನಲ್ಲಿ ಪದವಿ ಪಡೆದವರು. ಇವರದು ಸುಸ್ಥಿಯ ರೈತಾಪಿ ಕುಟುಂಬ. ರೈಸ್ ಮಿಲ್ ಮಾಲೀಕರಾಗಿದ್ದ ಇವರ ತಂದೆ ಅಂದಿನ ಕಾಲಕ್ಕೆ ಬರಪೀಡಿತ ಪ್ರದೇಶಕ್ಕೆ ಅಕ್ಕಿ ಸಂಗ್ರಹಿಸಿ ಲಾರಿಗಟ್ಟಲೆ ಕಳುಹಿಸಿಕೊಟ್ಟವರು. ತಂದೆಯವರ ಸೇವಾಪರತೆ ಇವರಲ್ಲಿ ರಕ್ತಗತವಾಗಿ ಬಂದಿದ್ದು ಇವರನ್ನು ಸಮಾಜಮುಖಿಯಾಗಿಸುವಲ್ಲಿ ಕಾರಣವಾಯಿತು ಎಂದೇ ಹೇಳಬಹುದು.

ನರಗುಂದ – ನವಲಗುಂದ ಚಳವಳಿ ಕಾವು ಮಂಡ್ಯ ಜಿಲ್ಲೆಗೂ ವ್ಯಾಪಿಸಿ ಮದ್ದೂರು ಹಾಗು ಮಂಡ್ಯದ ರೈತ ಪ್ರಮುಖರಾದ ಎಸ್. ಡಿ. ಜಯರಾಮ್, ಎಚ್. ಶ್ರೀನಿವಾಸ್, ವಿ ಆಶೋಕ್, ಮರೀಗೌಡ, ಮೊಹನ್ ಕುಮಾರ್ ರಂತಹ ಕ್ರೀಯಾಶೀಲ ತಂಡ ಪಾಂಡವಪುರದಲ್ಲಿ ರೈತಸಂಘ ಸ್ಥಾಪನೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಗದ್ದೆಯಲ್ಲಿ ಕಬ್ಬು  ತುಂಬಿ ಸಾಗಿಸುತ್ತಿದ್ದ ಗರಡಿ ಹುಡುಗನ‌ ಕಡೆ ಕೈ ತೋರಿದರು. ಕ್ಯಾತನಹಳ್ಳಿ ಜನ
ಪುಟ್ಟಣ್ಣಯ್ಯ ಅವರ ಕಂಡು ರೈತಚಳವಳಿ‌ವಿಷಯ ಕುರಿತು ಮಾತನಾಡಿದಾಗ ಕಾಂಗ್ರೇಸ್ಸಿಗರಾದ ಅಪ್ಪನಿಗೆ ಅಂಜಿ ಹಸಿರು ಶಾಲು ನಡುಗೆ ಕಟ್ಟಿಕ್ಕೊಂಡು, ಊರ ಹೊರಗೆ ಬಂದು ಶಾಲು ಹೆಗಲಿಗೇರಿಸಿಕ್ಕೊಂಡ ಬಂದ ಪುಟ್ಟಣ್ಣಯ್ಯಗೆ ಮತ್ತೊಂದು ಗರಡಿಮನೆಯ ಪರಿಚಯವಾಯಿತು.

ಪ್ರೊ‌.ಎಂ. ಡಿ. ನಂಜುಂಡಸ್ವಾಮಿ, ಸುಂದರೇಶ್, ರುದ್ರಪ್ಪ ಅವರ ಭಾಷಣಗಳಿಗೆ ಮಾರುಹೊದ ಪುಟ್ಟಣ್ಣಯ್ಯರ ಮೈ ಮನವೆಲ್ಲಾ ರೈತರ ವಿಚಾರವೇ ಮನೆ ಮಾಡಿತು. ಕ್ರೀಡಾ ಪಟುವು, ಹಾಸ್ಯ ಪ್ರವೃತ್ತಿಯ ಜೊತೆಗೆ ಇದ್ದ ಕ್ರೀಡಾ ಸ್ಪೂರ್ತಿ ಇವರೊಳಗೆ ನಾಯಕನನ್ನ ಹೊರಹೊಮ್ಮಿಸಿತು. ಪಾಂಡವಪುರ ಶೈಲಿಯ ಭಾಷೆ ಜನರಿಗೆ ಆಕರ್ಷಣಿಯಾವಾಯಿತು

ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಶ್ರೀ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶ್ರೀಮತಿ ಕೆ.ಎಸ್. ಶಾರದಮ್ಮ ದಂಪತಿಯ ಜೇಷ್ಠಪುತ್ರರಾಗಿ ದಿನಾಂಕ 23-12-1949ರಲ್ಲಿ ಜನಿಸಿದರು.

nudikarnataka.com

ಕೆ.ಎಸ್.ಪುಟ್ಟಣ್ಣಯ್ಯ ರೈತ ಚಳವಳಿ,ಮೂಲಕ ಬೆಳೆದ ಶಾಸಕ. ಇವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರ ಶಾಲೆಯಲ್ಲಿ ಪಳಗಿದ್ದರು. ಇವರು ರೈತನಾಯಕ, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದರು. ಕೃಷಿಕರ ಕುರಿತು ಅಪಾರ ಕಾಳಜಿ ಹೊಂದಿದ್ದ ಅವರು, ಪ್ರಕೃತಿ ಹಾಗೂ ಕ್ರೀಡೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದರು

ಸರ್ವಜನಾಂಗದವರ ಹಿತೈಷಿಯಾದ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರಿಂದ ಹೆಚ್ಚಿನ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಇವರನ್ನು 1994ನೇ ಇಸವಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರರಾಗಿ ಚುನಾಯಿಸಿ ಜಯಶೀಲರಾಗಿ ವಿಧಾನಸಭೆ ಪ್ರವೇಶಿಸಿ ಚೊಚ್ಚಲ ಅಧಿವೇಶನದಲ್ಲಿಯೇ ವಿಜೃಂಭಿಸಿದ್ದರು. ಈ ಅವಧಿಯಲ್ಲಿ ವಿಧಾನ ಸಭಾಧ್ಯಕ್ಷರಾಗಿದ್ದ ಜನರುಗಳ ಜೀವನದ ಸಾರಾಂಶಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಏಕೈಕ ಶಾಸಕರಾಗಿದ್ದರು.

ದನ, ನೇಗಿಲು, ನೊಗ, ಕುಂಟೆ ಹಗ್ಗ ಮೂಗದಾರಗಳಿಗೆ ಒಮ್ಮೆ ರೈತ ಹಾಕುವ ಬಂಡವಾಳ ಎಷ್ಠು ಗೊತ್ತಾ ? ಎಂದು ಪ್ರಶ್ನಿಸುತ್ತಲೆ ಬಂಡವಾಳದ ಲೆಕ್ಕ ಕೊಡುತ್ತಿದ್ದ ಪರಿ ರೈತರನ್ನ ಅಧಿಕಾರಿಗಳನ್ನ ಮಂತ್ರ ಮುಗ್ದ ಗೊಳಿಸಿ ಬಿಟ್ಟಿತು.

ಅಲ್ಲಿಂದ ಪುಟ್ಟಣ್ಣಯ್ಯ ಅವರ ಭಾಷಣಕ್ಕೆ ತನ್ನದೆ ಗತ್ತು ಶೈಲಿ ಹುಟ್ಟಿಕೊಂಡಿತು. ಕರ್ನಾಟಕ ರಾಜ್ಯ ರೈತಸಂಘ ದಿಂದ ಒಮ್ಮೆ,  ಸರ್ವೋದಯ ಕರ್ನಾಟಕದಿಂದ ಮತ್ತೊಮ್ಮೆ ಶಾಸಕರಾದ ಪುಟ್ಟಣ್ಣಯ್ಯ ಸದನದಲ್ಲಿ ಕೂಡ ಹಾಸ್ಯ ವ್ಯಂಗ್ಯ, ವಿಡಂಬನೆ ಮಾಡುತ್ತಲೆ ವ್ಯವಸ್ಥೆಗೆ ಚಾಟಿ ಬೀಸುತ್ತಾ, ದೇಸಿ ಶೈಲಿ ಭಾಷಣ ಮಾಡುತ್ತಿದ್ದರೆ, ಇಡೀ ಸದನವೇ  ಕಿವಿಗೊಟ್ಟು, ಭಾಷಣ ಕೇಳಿ ಇವರ ಹಾಸ್ಯದ ಚಾಟಿಗೆ ನಗೆಗಡಲಿನಲ್ಲಿ ಮುಳುಗುತ್ತಿತ್ತು.

ಶಾಸಕರುಗಳು ತಮ್ಮ ಸಮಯವನ್ನು ಪುಟ್ಟಣ್ಣಯ್ಯ ಅವರೆ ಬಳಸಿಕ್ಕೊಳ್ಳಲಿ ಎಂದು ಹೇಳಿ ಅವರಿಗೆ ಮಾತನಾಡಲು ಸಮಯ ನೀಡಿ ತಾವು ಕೇಳುಗರಾಗುತ್ತಿದ್ದರು. ಅವರ “ಹಸಿ ಬರ ಹುಸಿ ಬರ” ಕೂದಲಿಗೆ ಇರುವ ಬೆಲೆ ಕಬ್ಬಿಗೆ ಇಲ್ಲಾ ಎಂಬ ಉದಾಹರಣೆ ಮಾತುಗಳು ಹೊಸ ಚಿಂತನೆಯನ್ನು ಸದನದಲ್ಲಿ ಹುಟ್ಟುಹಾಕುತ್ತಿದ್ದವು.

ಪರ್ಯಾಯ ರಾಜಕಾರಣಕ್ಕಾಗಿ ಸದಾ ಹಂಬಲಿಸುತ್ತಿದ್ದ ಪುಟ್ಟಣ್ಣಯ್ಯ ತಮ್ಮ ಜೀವನವಿಡಿ ರೈತ ಹೋರಾಟಕ್ಕಾಗಿ ಶ್ರಮಿಸಿದವರು. ರಾಜಿ ಇಲ್ಲದ ರಾಜಕಾರಣ, ಸೈದ್ದಾಂತಿಕ ನಿಲುವು ಇವರ ನೆನಪನ್ನ ಜನಮನದಲ್ಲಿ ಹಸಿರಾಗಿಸಿವೆ.
ಇವರ 75 ನೇ ಹುಟ್ಟು ಹಬ್ಬ ಇನ್ನಷ್ಠು ವಿಜೃಂಭಣೆಗೊಳ್ಳಬೇಕಾಗಿತ್ತು.

ಇವರ ಜೀವನ ಸಾಧನೆ ಕುರಿತು, ಗ್ರಂಥ ಹೊರತರುವ ಕೆಲಸ ಆಗಬೇಕಾಗಿದೆ. ರಂಗಭೂಮಿ ಕಲಾವಿದರು ಆಗಿದ್ದ ಇವರ ಜೀವನ ಕುರಿತು ಸಾಕ್ಷ್ಯ ಚಿತ್ರತಂದು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವು ಆಗಬೇಕಾಗಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!