Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 2 ದಿನಗಳ ಗಡುವು ನೀಡಿದ ದರ್ಶನ್‌ ಪುಟ್ಟಣ್ಣಯ್ಯ

ರೈತರು ಕಳೆದ 2 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದರೂ ಸಹ ಸರ್ಕಾರವು ಕಬ್ಬಿಗೆ ಮತ್ತು ಹಾಲಿಗೆ ಬೆಂಬಲ ಬೆಲೆ ನಿಗಧಿಗೊಳಿಸಿಲ್ಲ, ಈಗಾಗಲೇ ಒಂದು ವಾರ ಗಡುವು ಮುಗಿದಿದೆ. ಆದರೂ ಸಭೆ ಕರೆದಿಲ್ಲ, ಇನ್ನೆರಡು ದಿನದಲ್ಲಿ ಸಭೆ ಕರೆದಿಲ್ಲ ಎಂದರೆ ನಿರ್ಣಯಗೊಳಿಸಿ ಹೋರಾಟದ ರೂಪು ರೇಷೆ ಬದಲಿಸಿಕೊಳ್ಳಲಾಗುವುದು ಎಂದು ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.

ಮಂಡ್ಯ ನಗರದ ಸರ್‌ಎಂ.ವಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಆಗಮಿಸಿದ ಮಂಗಳೂರುನಿಂದ ಬೆಂಗಳೂರಿಗೆ ಹೋಗುವ ಭಾವಕೈತಾ ಜಾಥಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಭಾನುವಾರ ಸ್ವಾಗತ ಕೋರಿದ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಗಂಭಿರವಾಗಿ ಪರಿಗಣಿಸುತ್ತಿಲ್ಲ, ಹಾಗಾಗಿ ರೈತರು ಒಗ್ಗೂಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ವೈಚಾರಿಕ ಕ್ರಾಂತಿಯನ್ನ ಮಾಡಿದ ಬಸವಣ್ಣನವರ ಪುಣ್ಯಕ್ಷೇತ್ರವಾದ ಕೂಡಲಸಂಗಮದಿಂದ ಈ ಯಾತ್ರೆ ಆರಂಭವಾಗಿದೆ. ಇದರಲ್ಲಿ ಕೃಷಿ ವಿಚಾರಗಳೇ ಪ್ರಧಾನವಾಗಿದೆ. ಕೇಂದ್ರ ಸರ್ಕಾರವು ಹೋರಾಟದ ಹಿನ್ನೆಲೆಯಲ್ಲಿ ಮೂರು ಮಸೂದೆಗಳನ್ನು ವಾಪಸ್‌ ಪಡೆದುಕೊಂಡಿತು. ಆದರೆ ರಾಜ್ಯ ಸರ್ಕಾರವು ಅದನ್ನು ಮುಂದುವರಿಸಿದೆ ಎಂದು ಆರೋಪಿಸಿದರು.

ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಸಭೆ ಕರೆದು ಚರ್ಚೆ ನಡೆಸದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ರೈತ ಮುಖಂಡರ ಜೊತೆ ಕೇಂದ್ರ ಸರ್ಕಾರ ಮಾತನಾಡಿದ ಹಾಗೆ ವಿದ್ಯುತ್‌ ಬಗ್ಗೆ ವಿಚಾರ ನಡೆಸಬೇಕು. ಆದರೆ ಇದಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ನಡೆದುಕೊಂಡಿದೆ. ವಿದ್ಯುತ್‌ ಕಾಯಿದೆಯನ್ನೇ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌, ಜಿಲ್ಲಾಧ್ಯಕ್ಷ ಕೆಂಪೂಗೌಡ, ಕಾರ್ಯದರ್ಶಿ ಲಿಂಗಪ್ಪಾಜಿ, ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಸರ್ವೋದಯ ಪಕ್ಷದ ಪ್ರಸನ್ನ ಎನ್‌.ಗೌಡ, ಮುಖಂಡರಾದ ಮಂಚೇಗೌಡ, ಕನ್ನಲಿ ಕೃಷ್ಣ, ವಿಜಯ್‌ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!