Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ರೈತ ಅನುಮಾನಾಸ್ಪದ ಸಾವು : ದೂರು ದಾಖಲು

ಕೃಷ್ಣರಾಜಪೇಟೆ ತಾಲೂಕಿನ ಮೈಲನಹಳ್ಳಿ ಗ್ರಾಮದ ರೈತ ರಮೇಶ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಆತನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮೃತನ ಪತ್ನಿ ರತ್ನ, ತನಗೆ ನ್ಯಾಯ ದೊರಕಿಸಿ ಕೊಡುವಂತೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ರತ್ನ ಅವರನ್ನು ಮೈಲನಹಳ್ಳಿ ಗ್ರಾಮದ ರಮೇಶ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ದಂಪತಿಗಳಿಗೆ ತೊಂದರೆ ಕೊಡುತ್ತಿದ್ದ ರಮೇಶನ ತಂದೆ ತಾಯಿಗಳು ಹಾಗೂ ಸಹೋದರರು ನೆಮ್ಮದಿಯಿಂದ ಜೀವನವನ್ನು ನಡೆಸುವುದಕ್ಕೆ ಅವಕಾಶವನ್ನೇ ಮಾಡಿಕೊಟ್ಟಿರಲಿಲ್ಲ. ರಮೇಶ್ ದಂಪತಿಗಳಿಗೆ ಮಕ್ಕಳಿಲ್ಲದಿರುವುದರಿಂದ ದಂಪತಿಗಳನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದ ರಮೇಶನ ತಂದೆ ತಾಯಿಗಳು ರತ್ನ ಅವರಿಗೆ ವರದಕ್ಷಿಣೆ ಕಿರುಕುಳವನ್ನು ಕೂಡ ನೀಡುತ್ತಾ ಇದ್ದರು ಎಂದು ತಿಳಿದು ಬಂದಿದೆ.

ರೈತ ರಮೇಶನ ಮೃತ ದೇಹವನ್ನು ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ತಂದಿದ್ದರೂ ಕೂಡ ರಮೇಶನ ತಂದೆ ತಾಯಿಗಳಾಗಲಿ ಮೈಲನಹಳ್ಳಿ ಗ್ರಾಮಸ್ಥರಾಗಲಿ ಆಸ್ಪತ್ರೆಗೆ ಬರದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಕತ್ತರಘಟ್ಟ ಗ್ರಾಮ ಪಂಚಾಯಿತಿಯ ಸದಸ್ಯ ಪರಮೇಶ್ ಮೃತನ ಪತ್ನಿ ರತ್ನ ಅವರಿಗೆ ಜೀವನ ನಿರ್ವಹಣೆಗೆ ಅನುಕೂಲವನ್ನು ಮಾಡಿಕೊಡಬೇಕು. ರಮೇಶನ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಮಾಡುವ ಮೂಲಕ ಆತನ ಅನುಮಾನಾಸ್ಪದ ಸಾವಿನ ಪ್ರಕರಣದ ಸತ್ಯಾಂಶ ಬಯಲು ಮಾಡಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಶಾಸಕ ಹೆಚ್.ಟಿ.ಮಂಜು, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಚನ್ನಕೇಶವ, ಗ್ರಾಮ ಪಂಚಾಯತ್ ಸದಸ್ಯೆ ವಿಜಯ, ಮುಖಂಡರಾದ ಮಹೇಶ್, ವಾಸು, ಬೋರೇಗೌಡ, ಅನಿಲ್, ಮಂಜೇಗೌಡ ಸೇರಿದಂತೆ ಹಲವಾರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತ ರಮೇಶನ ಪತ್ನಿ ರತ್ನ ಆವರಿಗೆ ಸಾಂತ್ವನ ಹೇಳಿದರು.

ರೈತನ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಶೇಖರ್ ಮುಂದಿನ ತನಿಖೆ ಕೈಗೊಂಡಿದ್ದಾರೆ. ವೈದ್ಯಾಧಿಕಾರಿ ಡಾ.ಜ್ಞಾನೇಶ್ ಶವದ ಮರೆಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ