Saturday, November 21, 2026

ಪ್ರಾಯೋಗಿಕ ಆವೃತ್ತಿ

ಮೇಕೆದಾಟು ಯೋಜನೆ | ಕೊಟ್ಟಮಾತಿನಂತೆ HDK ಅನುಮತಿ ಕೊಡಿಸಲಿ : ಶಿವನಂಜು

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಮಂಡ್ಯ ಜಿಲ್ಲೆಯ ಜನತೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅವರು ಅನುಮತಿ ಕೊಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಒತ್ತಾಯಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಮಂತ್ರಿ ಸ್ಥಾನಗಳಿಸಿದರೂ ಕೊಟ್ಟ ಮಾತಿಗೆ ನಿಲ್ಲದೇ ವಿನಃ ಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಮೇಕೆದಾಟು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ತಾವು ಕೊಟ್ಟ ಮಾತನ್ನು ತಿರುಚಿ ಕಾಂಗ್ರೆಸ್ ಪಕ್ಷದ ಮಿತ್ರಪಕ್ಷವಾದ ತಮಿಳುನಾಡು ಸರ್ಕಾರದ ಒಪ್ಪಿಗೆ ಕೊಡಿಸಲಿ, ಮೇಕೆದಾಟು ಯೋಜನೆಗೆ 5 ನಿಮಿಷದಲ್ಲೇ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂಬ ಷರತ್ತು ಬದ್ಧ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಕೇಂದ್ರದಿಂದ ಅನುಮತಿ ಕೊಡಿಸದೇ ಸಬೂಬು ಹೇಳುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ತಮಿಳುನಾಡು ಸರ್ಕಾರದ ಒಪ್ಪಿಗೆಬೇಕು, ಕಾನೂನು ತೊಡಕುಗಳಿವೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನೆಯ ನೀಲಿನಕ್ಷೆಯನ್ನು (ಡಿ.ಪಿ.ಆರ್) ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ನೀಡಿದೆ. ಅಂದರೆ ಮೇಕೆದಾಟು ಯೋಜನೆಗೆ ಕೇಂದ್ರ ಸಂಪನ್ಮೂಲ ಇಲಾಖೆ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಿ.ಡಬ್ಲ್ಯೂ.ಎಂ.ಎ. ಹೇಳಿರುತ್ತದೆ. ಈ ನಿಟ್ಟಿನಲ್ಲಿ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿ ಪಡೆಯುವತ್ತ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಮಂತ್ರಿಗಳೊಂದಿಗೆ ಕುಮಾರಸ್ವಾಮಿ ಅವರು,  ಪತ್ರವ್ಯವಹಾರ ನಡೆಸಿ ಅನುಮತಿ ಕೊಡಿಸಲಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯ ಶ್ರೀಧರ್, ಮಾಜಿ ಸದಸ್ಯ ಚನ್ನಪ್ಪ ಕೀಲಾರ, ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಕೀಲಾರ ಕೃಷ್ಣಪ್ಪ, ಶಿವಲಿಂಗಯ್ಯ, ನಾಗೇಶ್ ಉಮ್ಮಡಹಳ್ಳಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ