Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳ ಪಾಲಿಗೆ ಮಾರಣಾಂತಿಕ ನ್ಯೂಮೋನಿಯಾ : ಬೆನ್ನೂರ

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಿಗೆ ಮಾರಣಾಂತಿಕ ಕಾಯಿಲೆಯಾಗಿರುವ ನ್ಯೂಮೋನಿಯಾದ ಬಗ್ಗೆ ನಿರ್ಲಕ್ಷ್ಯ ಬೇಡ, ಎಚ್ಚರಿಕೆ ವಹಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ರಂಗನಾಥ ನಗರದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ” ವಿಶ್ವ ನ್ಯೂಮೋನಿಯಾ ದಿನ ” ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರತಿ ದಿನ ಜಾಗತಿಕವಾಗಿ 2,500 ಮಕ್ಕಳು ನ್ಯೂಮೋನಿಯಾಕ್ಕೆ ಬಲಿ ಆಗುತ್ತಿದ್ದಾರೆ, ಇದು 65 ವರ್ಷ ದಾಟಿದ ಹಿರಿಯರಿಗೂ ಇದು ಹೆಚ್ಚು ಪ್ರಾಣಾಂತಿಕವಾಗಬಲ್ಲದು, ಆದ್ದರಿಂದ ಜಾಗೃತಿಗಾಗಿ ಪ್ರತಿವರ್ಷ ನವೆಂಬರ್ 12 ರಂದು ವಿಶ್ವ ನ್ಯೂಮೋನಿಯಾ ದಿನ ಎಂದು ಆಚರಿಸಲಾಗುತ್ತಿದೆ ಎಂದರು.

ವರ್ಷಕ್ಕೆ ಹಲವು ಮಕ್ಕಳ ಸಾವಿಗೆ ಕಾರಣವಾಗುವ ನ್ಯೂಮೋನಿಯಾ ವಿರುದ್ಧ ಜನರಲ್ಲಿ ಜಾಗೃತಿ ಹೆಚ್ಚಿಸುವ ಸಲುವಾಗಿ ಈ ದಿನ ಮೀಸಲಿಡಲಾಗಿದೆ. “ನ್ಯೂಮೋನಿಯಾ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ, ನ್ಯೂಮೋನಿಯಾ ಎಲ್ಲರಿಗೂ ಬಾಧಿಸುತ್ತದೆ,”ಎಂಬ ಘೋಷಣೆಯೊಂದಿಗೆ ಈ ವ‍ರ್ಷ ಆಚರಿಸಲಾಗುತ್ತಿದೆ ಎಂದರು.

ನ್ಯೂಮೋನಿಯಾವು ಶ್ವಾಸಕೋಶದಲ್ಲಿ ಉಲ್ಬಣಗೊಳ್ಳುವದರಿಂದ ಶ್ವಾಸಕೋಶದ ಉರಿತ ಉಂಟಾಗುತ್ತದೆ ಮಕ್ಕಳಲ್ಲಿ ಕೆಮ್ಮು ಮತ್ತು ನೆಗಡಿ, ಉಸಿರಾಟ ತೊಂದರೆ, ಉಸಿರಾಡುವ ಸಮಯದಲ್ಲಿ ಪಕ್ಕೆ ಅಥವಾ ಎದೆಯ ಕೆಳಗೆ ಸೆಳೆತ, ತೀವ್ರ ಜ್ವರ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕೂಡಲೇ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದರು.

ಮಗುವಿಗೆ 6 ವಾರ, 14 ವಾರ ಮತ್ತು 9 ನೇಯ ತಿಂಗಳಲ್ಲಿ ತಪ್ಪದೇ ಲಸಿಕೆ ಹಾಕಿಸಿ, ನ್ಯೂಮೋನಿಯಾದಿಂದ ರಕ್ಷಣೆ ಪಡೆಯಲು ಮೂರು ಡೋಸ್ ನ್ನು ತಪ್ಪದೇ ಹಾಕಿಸಿ, ನ್ಯೂಮೋನಿಯಾ ತೊಲಗಿಸಿ, ಆರೋಗ್ಯವಂತ ಬಾಲ್ಯ ಒದಗಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಾಜು, ಅಂಗನವಾಡಿ ಕಾರ್ಯಕರ್ತೆಯರಾದ ರೇಷ್ಮಾ, ಸುಂದರಿ ಹಾಗೂ ಮಕ್ಕಳ ತಾಯಂದಿರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!