Friday, September 20, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಸಮಾಜಕ್ಕಾಗಿ ಹೆಣ್ಣು ಭ್ರೂಣಹತ್ಯೆ ತಡೆಗಟ್ಟಬೇಕಿದೆ: ಮಂಜುನಾಥ್

ಉತ್ತಮ ಸಮಾಜ ನಿರ್ಮಾಣದ ದೃಷ್ಠಿಯಿಂದ ಹೆಣ್ಣು ಭ್ರೂಣಹತ್ಯೆಯಂತಹ ಅನಿಷ್ಟ ಪಿಡುಗನ್ನು ತೊಲಗಿಸಬೇಕಿದೆ ಎಂದು ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಂಜುನಾಥ್ ತಿಳಿಸಿದರು.

ಅತ್ಯಾಚಾರ ವಿರೋಧಿ ಆಂದೋಲನ ಮತ್ತು ಮಹಿಳಾ ಮುನ್ನಡೆ ಸಂಘಟನೆ ವತಿಯಿಂದ ಉಮಡಹಳ್ಳಿ ಗ್ರಾಮದಲ್ಲಿ ನಡೆದ ಹೆಣ್ಣು ಭ್ರೂಣಹತ್ಯೆ ಕುರಿತು ಅರಿವಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಮುನ್ನಡೆಯ ಜೊತೆಗೆ ಉಮಡಹಳ್ಳಿ ಪಂಚಾಯ್ತಿಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು. ಇನ್ನೂ ಹೆಚ್ಚು ಮಹಿಳೆಯರನ್ನು ತಲುಪುವ ಉದ್ದೇಶವನ್ನು ಹೊಂದಿದ್ದೇವೆ, ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಅರಿವಿನ ಕಾರ್ಯಕ್ರಮಗಳು ಬಹಳ ಅಗತ್ಯ ಎಂದರು.

ಹೆಣ್ಣೆಂದರೆ ಹೊರೆಯಲ್ಲ ಹೆಣ್ಣೆಂದರೆ ಹೆಮ್ಮೆ

ಹೆಣ್ಣೆಂದರೆ ಹೊರೆಯಲ್ಲ, ಹೆಣ್ಣೆಂದರೆ ಹೆಮ್ಮೆ, ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣು ಭ್ರೂಣಹತ್ಯೆಯ ವಿಚಾರದಲ್ಲಿ ಮಂಡ್ಯ ಜಿಲ್ಲೆಯೂ ರಾಜ್ಯದಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲಲು ಪೈಪೋಟಿಗೆ ಬಿದ್ದಂತಿದೆ. ಸರಾಸರಿ 1000 ಗಂಡು ಮಕ್ಕಳಿಗೆ 1020 ಹೆಣ್ಣು ಮಕ್ಕಳು ಇರಬೇಕು ಎಂಬುದನ್ನು ಲಿಂಗಾನುಪಾತದ ಅಂಕಿ ಅಂಶಗಳು ಹೇಳುತ್ತವೆ ಆದರೆ ಪ್ರಸ್ತುತ ಹೆಣ್ಣುಭ್ರೂಣ ಹತ್ಯೆ, ಅತ್ಯಾಚಾರ,ಕೊಲೆಗಳಂತಹ ಪೈಶಾಚಿಕ ಕೃತ್ಯಗಳಿಂದ ಹೆಣ್ಣು ಮಕ್ಕಳ ಮಾರಣ ಹೋಮ ನಡೆಯುತ್ತಿರುವುದು ಆತಂಕದ ವಿಚಾರ ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಹೇಳಿದರು.

ಪೌಷ್ಟಿಕಾಂಶದ ಕೊರತೆಯಿಂದಾಗಿಯೂ ಬಹಳ ಚಿಕ್ಕ ವಯಸ್ಸಿಗೆ ತಾಯಿಯಂದಿರ ಮರಣಗಳು ಕೂಡ ಹೆಚ್ಚುತ್ತಿವೆ. ಇದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಬಹಳ ಗಂಭೀರವಾದ ಬಿಕ್ಕಟ್ಟನ್ನು ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲ. ಈಗಲೆ ಪ್ರತಿ ಹಳ್ಳಿಯಲ್ಲಿಯೂ ಗಂಡು ಮಕ್ಕಳಿಗೆ ಮದುವೆಯಾಗಲೂ ಹೆಣ್ಣು ಸಿಗದ ಕೆಟ್ಟ ಪರಿಸ್ಥಿತಿ ನಮ್ಮ ಮುಂದಿದೆ. ಹೆಣ್ಣು ಜೀವಕೊಡುವ ಶಕ್ತಿ, ಹಾಗಾಗಿ ಹೆಣ್ಣನ್ನು ಕೀಳಾಗಿ ಕಾಣುವ, ಹೆಣ್ಣೆಂದರೆ ಹೊರೆ ಎನ್ನುವ ಮನಸ್ಥಿತಿ ಕಡಿಮೆ ಯಾಗಬೇಕು. ಸೊಸೆಯಾಗಿ ಬೇಕು ಮಗಳಾಗಿ ಮಾತ್ರ ಬೇಡ ಎನ್ನುವ ಮನಸ್ಥಿತಿಯಿಂದ ತುಂಬಿರುವ ಸಮಾಜವನ್ನು ಸರಿಪಡಿಸಲು ಸಂಘ ಸಂಸ್ಥೆಗಳ ಜೊತೆಗೆ ನಾಗರೀಕರು ಕೂಡ ನೈತಿಕತೆಯ ಜವಾಬ್ದಾರಿಯನ್ನು ಹೊರಬೇಕು ಎಂದು ತಿಳಿಸಿದರು.

ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಅವರು, ಏಕಪಾತ್ರ ಅಭಿನಯದ ಕಿರುನಾಟಕವನ್ನು ಪ್ರಸ್ತುತಪಡಿಸಿ ಹೆಣ್ಣು ಮಕ್ಕಳೊಂದಿಗೆ ಸಂವಾದವನ್ನು ನಡೆಸಿಕೊಟ್ಟರು, ಇದರಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಭಂದಿಸಿದ PCPNDT ಕಾಯ್ದೆಯ ಬಗ್ಗೆ ತಿಳಿಸಿದರು. ಮಂಡ್ಯದಲ್ಲಿ ನಡೆದಿರುವ ಹೆಣ್ಣುಭ್ರೂಣ ಹತ್ಯೆಗಳ ಕೃತ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಹೆಣ್ಣು ಭ್ರೂಣಹತ್ಯೆಗೆ ಪ್ರಚೋದಿಸುವ ಕುಟುಂಬದವರಿಗೂ ಮತ್ತು ವೈದ್ಯರ ಮೇಲೂ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ. ಅಂತಹ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನದೊಂದಿಗೆ ಅಂಭಿನಂದಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿನಿತ್ಯ ಹೆಣ್ಣು ಭ್ರೂಣಹತ್ಯೆಗಳು, ಸಾಮೂಹಿಕ ಅತ್ಯಾಚಾರಗಳು ಸಮಾಜದಲ್ಲಿ ಅಘಾತಕಾರಿ ಪರಿಣಾಮವನ್ನು ಬೀರುತ್ತಿವೆ, ಸಮಾಜದಲ್ಲಿ ಸುಲಭವಾಗಿ ಹೆಣ್ಣನ್ನು ಭೋಗಿಸುವ ವಸ್ತುವಾಗಿ ಮತ್ತು ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತ ಎಲ್ಲಾ ಸಮಸ್ಯೆಗಳಿಗೂ ಹೆಣ್ಣೆ ಮೂಲ ಕಾರಣ ಅನ್ನುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಜೊತೆಗೆ ನಮ್ಮ ಮನೆಯ ಗಂಡು ಮಕ್ಕಳಿಗೂ ಲಿಂಗ ಸಂವೇದನೆಯನ್ನು ಕಲಿಸುವ ಮೂಲಕ ಹೆಣ್ಣನ್ನು ಗೌರವಿಸುವ ಮತ್ತು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಅತ್ಯಾಚಾರದ ವಿಚಾರಗಳಿಗೆ ಸಂಭಂದಿಸಿದಂತೆ POSCO ಕಾನೂನಿನ ಬಗ್ಗೆ ತಿಳಿಸಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅತ್ಯಾಚಾರಗಳನ್ನು ತಡೆಗಟ್ಟುವುದರಲ್ಲಿ ನಾಗರೀಕರ ಪಾತ್ರವು ಮುಖ್ಯವಾಗಿದ್ದು, ಪುಟ್ಟ ಕಂದಮ್ಮಗಳಿಂದ ಹಿಡಿದು ಸಮಾಜದಲ್ಲಿ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕೆಲಸ ಮಾಡುವುದಲ್ಲದೆ ನಮ್ಮ ಮನೆಯ ಗಂಡು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬಾಲ ಅಪರಾಧಿಗಳು ಆಗುವುದನ್ನು ತಪ್ಪಿಸುವ ಹೊಣೆಗಾರಿಕೆಯನ್ನು ಸಮಾಜ ನಿರ್ವಹಿಸಬೇಕು, ಅತ್ಯಾಚಾರ ಮುಕ್ತ ದೌರ್ಜನ್ಯ ಮುಕ್ತ ಸಮಾಜವನ್ನು ಕಟ್ಟಲು ಮಂಡ್ಯದಿಂದಲೇ ಮುನ್ನುಡಿ ಬರೆಯೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ನಗರಗೆರೆ ಜಗದೀಶ್, ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿ  ಉಪಾಧ್ಯಕ್ಷೆ ಶೋಭ, ಆಶಾ ಕಾರ್ಯಕರ್ತರಾದ ಗಂಗಾ, ರೂಪ ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!