ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಒಗ್ಗೂಡಿಸುವ ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾ.29ರಿಂದ 31ರವರೆಗೆ ಶಕ್ತಿದೇವತೆ ಪಟ್ಟಲದಮ್ಮ ಹಾಗೂ ತೊರೆಹಳ್ಳದಮ್ಮನ ಹಬ್ಬ ನಡೆಯಲಿದೆ.
ಮಾ.29ರಂದು ಬಾಯಿಬೀಗ ಮತ್ತು 30ರಂದು ಮುಂಜಾನೆ ಕೊಂಡೋತ್ಸವ, ಸಂಜೆ 4ಗಂಟೆಗೆ ಪೂಜಾ ಕುಣಿತ, ಆರತಿ, ಪಲ್ಲಕ್ಕಿ, ವೀರಗಾಸೆ, ಕೀಲು ಕುದುರೆ, ಗೊಂಬೆಗಳ ನೃತ್ಯ ಮತ್ತು ಜಾತ್ರಾ ಮಹೋತ್ಸವ ಇರಲಿದೆ. 31ರಂದು ದೇವಿಗೆ ಬೆಳ್ಳಿ ಅಲಂಕಾರ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿದೆ. ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗಲೆಂದು 29ರಂದು ರಾತ್ರಿ 8ಗಂಟೆಗೆ ಪಟ್ಟಲದಮ್ಮ ಸೇವಾ ಸಮಿತಿ ಹಾಗೂ 30ರಂದು ರಾತ್ರಿ 7ಗಂಟೆಗೆ ಗಟ್ಟಿಹಳ್ಳಿ ಗ್ರಾಮಸ್ಥರಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇನ್ನು ಏ.14ರಂದು ಬೋರೇದೇವರ ಕೊಂಡೋತ್ಸವ ಮತ್ತು ಹಬ್ಬ ನಡೆಯಲಿದೆ.
ಪ್ರಸಿದ್ಧ ಸ್ಥಳವಾದ ಗೊಂಡಾರಣ್ಯ
ಸುಮಾರು 300 ವರ್ಷದ ಹಿಂದೆ ಗೊಂಡಾರಣ್ಯವಾಗಿದ್ದ ಈ ಸ್ಥಳದಲ್ಲಿ ಪಟ್ಟಲ್ಲದಮ್ಮ ದೇವಿ ನೆಲೆಸಿದ್ದು ವರ್ಷಗಳು ಕಳೆದಂತೆ ಪುರಾಣ ಪ್ರಸಿದ್ಧ ಸ್ಮಳವಾಗಿ ಬದಲಾಗಿದೆ. ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ದೇವಾಯಲದಲ್ಲಿ ಪಾರ್ವತಿ ಅಥವಾ ಪಟ್ಟಲದಮ್ಮ ದೇವಿಗೆ ಮೊದಲ ಪೂಜೆ ನಡೆಯುತ್ತಿತ್ತು. ಆದರೆ 1565ನೇ ಇಸವಿಯಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿತ್ತು ಇದರಿಂದ ಬೇಸತ್ತ ಪಟ್ಟಲದಮ್ಮ ದೇವಿ ತುಂಗಾಭದ್ರ ನದಿಗೆ ಹಾರಿ ನೀರಿನಲ್ಲಿದ್ದ ಬಿಂದಿಗೆಗೆ ಸೇರಿಕೊಂಡಿದ್ದರು. ಅದು ತೇಲುತ್ತಾ ಕಲುಬುರಗಿಯ ನದಿಯಲ್ಲಿ ಬರುತ್ತಿದ್ದ ವೇಳೆ ಬಿಂದಿಗೆ ಹೊಂಬಾಳೆ ಮನೆತನಕ್ಕೆ ಸಿಕ್ಕಿದೆ.
ಇನ್ನು ಹೊಂಬಾಳೆ ಮನೆತನದವರು ಅಡಿಕೆ ಮಾರಾಟ ಮಾಡಲು ಮೈಸೂರು ಕಡೆಗೆ ತೆರಳಿದ್ದಾರೆ. ಈ ವೇಳೆ ಬಿಂದಿಗೆಯೂ ಜತೆಗಿತ್ತು, ವ್ಯಾಪಾರ ಮಾಡುತ್ತಾ ಬರುತ್ತಿದ್ದ ಇವರು ಕೌಡ್ಲೆ ಗ್ರಾಮಕ್ಕೆ ಬರುವಷ್ಟರಲ್ಲಿ ಸಂಜೆಯಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ತಂಗುವ ನಿರ್ಧಾರ ಮಾಡಿದ್ದರು, ಊಟಕ್ಕೆಂದು ಅಡುಗೆ ಮಾಡಲು ಪ್ರಾರಂಭಿಸಿದರು. ಆದರೆ ರಾತ್ರಿ ಪೂರ್ತಿ ಅಕ್ಕಿ, ಬೇಯಿಸಿದರೂ ಅನ್ನವಾಗಲೇ ಇಲ್ಲ, ಕೊನೆಗೆ ಎಲ್ಲರೂ ಮಲಗಿದ್ದಾರೆ. ಈ ಸಂದರ್ಭದಲ್ಲಿಯೇ ವ್ಯಾಪಾರಿಗಳಲ್ಲೊಬ್ಬರಿಗೆ ದೇವಿಯ ಪ್ರೇರಣೆಯಾಗಿ ತಾನು ಕೌಡ್ಲೆಯಲ್ಲಿಯೇ ನೆಲೆಸುವುದಾಗಿ ಗುಡಿ ಕಟ್ಟಲು ಆಜ್ಞೆ ಮಾಡಿದಳು ಎಂಬ ಐತಿಹ್ಯವಿದೆ.
ಅಂದಿನಿಂದ ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ, ವರ್ಷಕ್ಕೆ ಎರಡು ಬಾರಿ ಅಂದರೆ ವಿಜಯದಶಮಿ ನಂತರ ಮತ್ತು ಯುಗಾದಿ ಹಬ್ಬದ ವಾರಕ್ಕೆ ಮುನ್ನ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಾ ಬಂದಿದೆ.




