Friday, September 20, 2024

ಪ್ರಾಯೋಗಿಕ ಆವೃತ್ತಿ

ಫೈಟರ್ ರವಿಯನ್ನು ನಡುನೀರಿನಲ್ಲಿ ಕೈ ಬಿಟ್ಟ ಬಿಜೆಪಿ : ಮುಂದಿನ ದಾರಿ ಏನು ?

ರಾಜ್ಯ ಬಿಜೆಪಿಯಲ್ಲಿ ಹಿರಿಯ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಂತಹ ಘಟಾನುಘಟಿ ನಾಯಕರನ್ನು ಮೂಲೆ ಗುಂಪು ಮಾಡುತ್ತಿರುವ ಸಂದರ್ಭದಲ್ಲೇ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಫೈಟರ್ ರವಿ ಎಂಬ ಯುವ ನಾಯಕನಿಗೆ ಟಿಕೆಟ್ ನೀಡದೇ ಮೂಲೆಗೆ ಸರಿಸಿದೆ ಎಂಬ ಆರೋಪಗಳು ಈಗ ಕೇಳಿ ಬಂದಿದೆ.

ಉತ್ತಮ ಜನಪರ ಕೆಲಸಗಳನ್ನು ಮಾಡುವ ಮೂಲಕ ನಾಗಮಂಗಲ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದ ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಅವರಿಗೆ ಕೊನೆಗೂ ಬಿಜೆಪಿ ಕೈ ಕೊಟ್ಟಿದೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಕೋಟ್ಯಾಂತರ ರೂ. ಸುರಿದು ಮಾಡಿದ್ದ ಜನಪರ ಕೆಲಸಗಳಿಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತೆ ಮಾಡಿ ಬಿಟ್ಟಿದೆ ಎಂದು ಫೈಟರ್ ರವಿ ಬೆಂಬಲಿಗರಾದ ಪ್ರೀತಮ್ ಗೌಡ ಹಾಗೂ ದರ್ಶನ್ ಆಕ್ರೋಶ ಹೊರ ಹಾಕಿದ್ದಾರೆ.

ಫೈಟರ್ ರವಿ ಬರುವುದಕ್ಕೆ ಮುನ್ನ ನಾಗಮಂಗಲದಲ್ಲಿ ಬಿಜೆಪಿಯೂ ಹೇಳಲು ಹೆಸರಿಲ್ಲದಂತೆ ಇತ್ತು. ಕಳೆದ 1 ವರ್ಷದಿಂದ ಕ್ಷೇತ್ರದ ಜನರೊಂದಿಗೆ ಒಟನಾಟ ಹೊಂದಿದ್ದ ಫೈಟರ್ ರವಿ ನಾಗಮಂಗಲ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 210 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು, 120 ಶಾಲೆ-ಕಾಲೇಜುಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳು, ಸುಮಾರು 500ಕ್ಕೂ ಹೆಚ್ಚು ದೇವಾಲಯಗಳಿಗೆ ಸಹಾಯಧನ, ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಫೈಟರ್ ರವಿ ಸೈ ಎನಿಸಿಕೊಂಡರು. ಆದರೆ ಅಂತಹ ನಾಯಕನ ಸೇವೆಯನ್ನು ‘ಹೊಳೆಯಲ್ಲಿ ಹುಣಸೆ ಹಣ್ಣು ತೇಯ್ದಂತೆ’ ಬಿಜೆಪಿ ಮಾಡಿದೆ ಎಂದು ಫೈಟರ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿಗೂ ಕಾರ್ಯಕ್ರಮಗಳಿಗೂ ದುಬಾರಿ ವೆಚ್ಚ ಮಾಡಿದ ಫೈಟರ್ ರವಿ 

ಮಂಡ್ಯಕ್ಕೆ ಅಮಿತ್ ಶಾ ಬಂದಾಗ ನಾಗಮಂಗಲ ಕ್ಷೇತ್ರದಿಂದ ಸುಮಾರು 10 ಸಾವಿರ ಜನರನ್ನು ಬಸ್ಸುಗಳ ಮೂಲಕ ಕರೆ ತರಲಾಗಿತ್ತು. ಮತ್ತೇ ಪ್ರಧಾನಿ ಮೋದಿ ರೋಡ್ ಶೋ ಕಾರ್ಯಕ್ರಮಕ್ಕೂ 10 ಸಾವಿರ ಜನರನ್ನು ಕರೆತರಲಾಗಿತ್ತು, ಇದೆಲ್ಲದರ ವೆಚ್ಚವನ್ನು ನೋಡಿಕೊಂಡಿದ್ದೆ ಫೈಟರ್ ರವಿ ಎಂಬುದು ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿ ಹರಿದಾಡುತ್ತಿದೆ. ಅಲ್ಲದೇ ನಾಗಮಂಗಲದಲ್ಲಿ ನಡೆದ ಮಹಿಳೆಯರ ಸಮಾವೇಶಕ್ಕೆ ಕ್ಷೇತ್ರದಾದ್ಯಂತ 4 ಸಾವಿರ ಮಹಿಳೆಯರನ್ನು ಕರೆ ತರಲಾಗಿತ್ತು. ಅಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ವಿರುದ್ದ ನಾಗಮಂಗಲದಲ್ಲಿ ಪ್ರತಿಭಟನೆ ನಡೆಸಲು 1 ಸಾವಿರ ಜನರನ್ನು ಕರೆತರಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳ ಹಿಂದಿರುವ ಆರ್ಥಿಕ ಶಕ್ತಿ ಇದೆ ಫೈಟರ್ ರವಿಯವರೇ ಆಗಿದ್ದರು. ಅಂತಹ ನಾಯಕನನ್ನು ಬಿಜೆಪಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ವಂಚಿಸಿದೆ ಎಂದು ಫೈಟರ್ ರವಿ ಬೆಂಬಲಿಗರು ಕಿಡಿಕಾರಿದ್ದಾರೆ.

ಫೈಟರ್ ರವಿ ಅವರಿಂದ ಇಷ್ಟೊಂದು ಉಪಯೋಗ ಪಡೆದ ಬಿಜೆಪಿ, ತದನಂತರ ನಾಗಮಂಗಲ ಕ್ಷೇತ್ರದಲ್ಲಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರನ್ನು ಪಕ್ಷಕ್ಕೆ ಸೇರಿಕೊಂಡಿತು. ಆನಂತರ ಎಲ್ಲವೂ ಬದಲಾಗ ತೊಡಗಿತು. ಬಿಜೆಪಿ ನಾಗಮಂಗಲ ಟಿಕೆಟ್ ಘೋಷಣೆ ಮಾಡಿದ್ದು, ಅದು ಎಲ್.ಆರ್.ಶಿವರಾಮೇಗೌಡ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರ ಪಾಲಾಗಿದೆ. ಆದರೆ ಬಿಜೆಪಿಯನ್ನು ನಂಬಿ ರಾಜಕೀಯಕ್ಕೆ ಕಾಲಿಡಲು ಸಿದ್ದತೆ ನಡೆಸಿದ ಫೈಟರ್ ರವಿ ಈಗ ಪಶ್ಚಾತಾಪ ಪಡುವಂತಾಗಿದೆ. ಇದು ಒಂಥರಾ ಕೃಷಿ ಮಾಡಿದವರು ಯಾರೋ, ಭತ್ತ ಬಡೆದು ಅದರ ಫಲ ತಿನ್ನುತ್ತಿರುವವರು ಯಾರೋ ಎಂಬಂತಾಗಿದೆ.

ಮುನ್ನೆಲೆಗೆ ಬಂದ ರೌಡಿಶೀಟರ್ 

ಸಮಾಜಸೇವೆಯಲ್ಲಿ ತನ್ನ ಪಾಡಿಗೆ ತಾನು ತೊಡಗಿಸಿಕೊಂಡಿದ್ದಾಗ ಇಲ್ಲದ ರೌಡಿಶೀಟರ್ ಪಟ್ಟ, ಬಿಜೆಪಿ ಸೇರುತ್ತಿದ್ದಂತೆಯೇ ಮುನ್ನೆಲೆಗೆ ಬಂದಿತು. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬುದು ಫೈಟರ್ ರವಿ ಬೆಂಬಲಿಗರ ಮಾತಾಗಿದೆ. ಫೈಟರ್ ರವಿ ಮೇಲಿದ್ದ ಎಲ್ಲಾ ಆರೋಪಗಳನ್ನು ಹೈಕೋಟ್ ಖುಲಾಸೆ ಮಾಡಿದೆ. ಹೀಗಿದ್ದರೂ ಮತ್ತೇ ರೌಡಿ ಶೀಟರ್ ಎಂಬ ಪದವನ್ನು ಮುನ್ನೆಲೆಗೆ ತಂದವರೂ ಯಾರು ? ಈ ಹಿಂದೆ ಸಮಾಜ ಸೇವೆ ಮಾಡುವಾಗ ಅವರು ರೌಡಿ ಶೀಟರ್ ಆಗಿರಲಿಲ್ಲವೇ ? ಎಂದು ಫೈಟರ್ ಬೆಂಬಲಿಗರು ಪ್ರಶ್ನಿಸುತ್ತಾರೆ.

ರೌಡಿಶೀಟರ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದೆ ಎಂದು ಬಿಜೆಪಿ ನಾಯಕರು ಸಮಜಾಯಿಷಿ ನೀಡಿದರೂ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಏಕೆ ರೌಡಿ ಶೀಟರ್ ಗಳಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂಬುದನ್ನು ಫೈಟರ್ ಬೆಂಬಲಿಗರು ಪ್ರಶ್ನಿಸುತ್ತಾರೆ.

ಫೈಟರ್ ಮುಂದಿನ ದಾರಿ ಏನು

ನಾಗಮಂಗಲದಲ್ಲಿ ಶತಾಯ ಗತಾಯ ಬಿಜೆಪಿ ಟಿಕೆಟ್ ಪಡೆಯಬೇಕೆಂಬ ಹಠಕ್ಕೆ ಬಿದ್ದಿದ್ದ ಫೈಟರ್ ರವಿ ತೀವ್ರ ನಿರಾಸೆಯಾಗಿದ್ದು, ಈಗ ಮುಂದಿನ ದಾರಿ ಏನು ಎಂದು ಸ್ವತಃ ಫೈಟರ್ ರವಿ ಯೋಚಿಸುವಂತಾಗಿದೆ. ಒಂದು ಕಡೆ ಜೆಡಿಎಸ್ ನ ಸುರೇಶ್ ಗೌಡ ಅವರ ಕಟ್ಟಾ ವಿರೋಧಿ ಎಂದೇ ಗುರುತಿಸಿಕೊಂಡಿರುವ ಫೈಟರ್ ರವಿ ಜೆಡಿಎಸ್ ನೊಂದಿಗೆ ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂಬುದು ಖಚಿತ. ಮತ್ತೊಂದೆಡೆ ಬಿಜೆಪಿ ಟಿಕೆಟ್ ಪಡೆದಿರುವ ಎಲ್.ಆರ್.ಶಿವರಾಮೇಗೌಡ ಅವರೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟ. ಆಗಿದ್ದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಅವರಿಗೆ ಬೆಂಬಲ ನೀಡುತ್ತಾರೆಯೇ ? ಅಥವಾ ಪಕ್ಷೇತರವಾಗಿ ಸ್ಪರ್ಧಿಸಿ ತಮ್ಮ ಶಕ್ತಿಯನ್ನು ತೋರ್ಪಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪಕ್ಷೇತರ ಸ್ಪರ್ಧೆಗೆ ಸಿದ್ದತೆ

ಬಿಜೆಪಿ ನಂಬಿ ರಾಜಕೀಯ ಮಾಡಲು ಬಂದಿದ್ದು ತಪ್ಪಾಗಿದೆ ಎಂದು ಅರಿವಾಗಿರುವ ಫೈಟರ್ ರವಿ ಈಗ ಪಕ್ಷೇತರವಾಗಿ ಚುನಾವಣಾ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಬಲಿಗರು ಹಾಗೂ ಹಿತೈಷಿಗಳ ಅಭಿಪ್ರಾಯ ಪಡೆಯುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಒಂದು ವೇಳೆ ಫೈಟರ್ ರವಿಯನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಯಾವುದಾದರೂ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಬಿಜೆಪಿ ನೀಡುತ್ತದೆಯೋ ? ಎಂಬುದನ್ನು ಕಾದು ನೋಡಬೇಕಿದೆ. ಆದರೆ ಮುಂದಿನ ದಿನಗಳಲ್ಲಿ ನಾಗಮಂಗಲ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳಾಗಲಿವೆಯೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!