Friday, September 20, 2024

ಪ್ರಾಯೋಗಿಕ ಆವೃತ್ತಿ

ಧಾರ್ಮಿಕ ದ್ವೇಷ ಹರಡಿದ ಆರೋಪ| ಅಣ್ಣಾಮಲೈ ವಿರುದ್ದ ಪ್ರಕರಣ ದಾಖಲು

ಸ್ಥಳೀಯ ಯುವಕರ ವಿರೋಧದ ನಡುವೆಯೂ ಚರ್ಚಿಗೆ ಭೇಟಿ ಕೊಟ್ಟ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ವಿರುದ್ದ ಧಾರ್ಮಿಕ ದ್ವೇಷ ಹರಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಅಣ್ಣಾಮಲೈ ಮುನ್ನಡೆಸುತ್ತಿರುವ ‘ಎನ್‌ ಮಣ್ಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನರು) ಯಾತ್ರೆಯು ಕಳೆದ ಸೋಮವಾರ ಧರ್ಮಪುರಿ ಜಿಲ್ಲೆ ತಲುಪಿತ್ತು. ಈ ವೇಳೆ ಜಿಲ್ಲೆಯ ಬೊಮ್ಮಿಡಿ ಬಳಿಯ ಪಲ್ಲಿಪಟ್ಟಿಯಲ್ಲಿರುವ ಕ್ರೈಸ್ತರ ಪವಿತ್ರ ಲೂರ್ಡ್ಸ್ ಬೆಟ್ಟದ ದೇವಾಲಯದ ಮಾತೆ ಮೇರಿ ಪ್ರತಿಮೆಗೆ ಮಾಲೆ ಹಾಕಲು ಅಣ್ಣಾಮಲೈ ಮುಂದಾಗಿದ್ದರು. ಇದಕ್ಕೆ ಸ್ಥಳೀಯ ಕ್ರೈಸ್ತ ಸಮುದಾಯದ ಯುವಕರು ವಿರೋಧ ವ್ಯಕ್ತಪಡಿಸಿದ್ದರು.

ಮಣಿಪುರದಲ್ಲಿ ನಮ್ಮ ಜನರ (ಕ್ರೈಸ್ತ ಸಮುದಾಯದ) ಹತ್ಯೆಗೆ ಕಾರಣರಾದ ನೀವು, ಇಲ್ಲಿ ನಮ್ಮ ದೇವರಿಗೆ ಮಾಲೆ ಹಾಕಬಾರದು. ನೀವು ನಮ್ಮ ಜನರನ್ನು ಹತ್ಯೆ ಮಾಡಿದ್ದೀರಿ, ನಮ್ಮ ಚರ್ಚುಗಳನ್ನು ನಾಶಗೈದಿದ್ದೀರಿ. ಇದು ಪವಿತ್ರ ಭೂಮಿ, ನೀವು ಇಲ್ಲಿಗೆ ಬರಬಾರದು ಎಂದು ಕ್ರೈಸ್ತ ಯುವಕರು ಅಣ್ಣಾಮಲೈಗೆ ಘೇರಾವ್ ಹಾಕಿದ್ದರು. ನೀವು ಯಾಕೆ ನಮ್ಮ ಜನರನ್ನು ಕೊಂದಿರಿ? ಎಂದು ಪ್ರಶ್ನಿಸಿದ್ದರು.

ಈ ವೇಳೆ ಕೋಪಗೊಂಡ ಅಣ್ಣಾಮಲೈ, ನೀವು ಡಿಎಂಕೆಯವರ ತರ ಮಾತನಾಡಬೇಡಿ. ನಾವು ಎಲ್ಲಿಗೆ ಬೇಕಾದರೂ ಹೋಗಬಹುದು, ಅದನ್ನು ತಡೆಯಲು ನಿಮಗೆ ಯಾವ ಹಕ್ಕಿದೆ? ಈ ಚರ್ಚ್ ನಿಮ್ಮ ಹೆಸರಿನಲ್ಲಿದೆಯಾ? ನಾನು 10 ಸಾವಿರ ಜನರನ್ನು ಇಲ್ಲಿಗೆ ಕರೆತಂದು ಧರಣಿ ಕುಳಿತರೆ ಏನಾಗಬಹುದು? ಎಂದು ಪ್ರಶ್ನಿಸಿದ್ದರು. ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಯುವಕರ ಪ್ರತಿಭಟನೆಯ ನಡುವೆಯೂ ಪೊಲೀಸರ ಮಧ್ಯಪ್ರವೇಶದ ಮೂಲಕ ಅಣ್ಣಾಮಲೈ ಮೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.

ಘಟನೆ ಸಂಬಂಧ ಪಲ್ಲಿಪಟ್ಟಿಯ ಯುವಕ ನೀಡಿದ ದೂರಿನ ಆಧಾರದ ಮೇಲೆ ಬೊಮ್ಮಿಡಿ ಪೊಲೀಸರು ಅಣ್ಣಾಮಲೈ ವಿರುದ್ಧ ಐಪಿಸಿಯ 153 (ಎ) (ಎ), 504, 505 (2) ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕರ ಶಾಂತಿಗೆ ಧಕ್ಕೆ ತರುವುದು ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!