Monday, October 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜನರ ಅವಶ್ಯಕತೆಗೆ ತಕ್ಕಂತೆ ಬಂದೂಕು ಲೈಸೆನ್ಸ್ : ಮಲ್ಲಿಕಾರ್ಜುನ ಬಾಲದಂಡಿ

ಹೆಚ್ಚು ಹಣವಿದ್ದಾಗ ಹೇಗೆ ನಿದ್ದೆ ಬರುವುದಿಲ್ಲವೋ ಹಾಗೆಯೇ ಬಂದೂಕು, ಗನ್ ಇದ್ದಾಗಲೂ ಕೂಡ ಕೆಲವರಿಗೆ ಅವುಗಳ ನಿರ್ವಹಣೆ ಜವಾಬ್ದಾರಿ, ಸಂರಕ್ಷಣೆ ಮತ್ತು ಭಯದಿಂದಾಗಿ ನಿದ್ದೆ ಬರುವುದಿಲ್ಲ. ಬಂದೂಕು, ಗನ್ ಲೈಸೆನ್ಸ್ ಸದುಪಯೋಗಕ್ಕಿಂತ ದುರುಪಯೋಗವಾಗುವ ಸಂಭವವೇ ಹೆಚ್ಚು. ಹೀಗಾಗಿ ಜನರ ಅವಶ್ಯಕತೆಗೆ ತಕ್ಕಂತೆ ಗನ್ ಲೈಸೆನ್ಸ್ ನೀಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮಂಡ್ಯ ನಗರದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಶನಿವಾರ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗ ನೀವು ಬಂದೂಕು ತರಬೇತಿಯನ್ನಷ್ಟೇ ಪಡೆದಿದ್ದೀರಿ. ಆದರೆ, ಎಲ್ಲರಿಗೂ ಬಂದೂಕು ಲೈಸೆನ್ಸ್ ಸಿಗುವುದಿಲ್ಲ. ಲೈಸೆನ್ಸ್ ಪಡೆಯುವುದು ನಿಜಕ್ಕೂ ಸವಾಲು. ಅದಕ್ಕೆ ಸಕಾರಣಗಳನ್ನು ನೀಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಲೈಸೆನ್ಸ್ ಪಡೆದು ಬಂದೂಕು, ಗನ್ ಖರೀದಿಸಿದ ಬಳಿಕ ಮತ್ತೊಂದು ಸವಾಲಿನ ಕೆಲಸ ಎದುರಾಗುತ್ತದೆ. ಬಂದೂಕು, ಗನ್‌ಗಳ ನಿರ್ವಹಣೆ ದೊಡ್ಡ ಜವಾಬ್ದಾರಿ ಎಂದು ಹೇಳಿದರು.

ಎಷ್ಟೋ ಮಂದಿ ತಾವು ಹೊಂದಿರುವ ಬಂದೂಕು,ಗನ್‌ಗಳು ಹಾಗೂ ಲೈಸೆನ್ಸ್ ಅನ್ನು ಪೊಲೀಸ್ ಇಲಾಖೆಗೆ ವಾಪಸ್ ನೀಡಿರುವ ಉದಾಹರಣೆಗಳಿವೆ ಎಂದರು.

ನಿರ್ಲಕ್ಷ್ಯ ಕೋಪ, ಪ್ರದರ್ಶನದ ಮನೋಭಾವದಿಂದಾಗಿ ಕೆಲವೊಮ್ಮೆ ಬಂದೂಕು/ಗನ್‌ಗಳು ದುರ್ಬಳಕೆಯಾಗುವ ಸಾಧ್ಯತೆಯಿರುತ್ತದೆ. ಸಣ್ಣಪುಟ್ಟ ಜಗಳವಾದಾಗ ಕೆಲವರು ಕೋಪದಲ್ಲಿ ತಾವು ಹೊಂದಿರುವ ಬಂದೂಕು/ಗನ್‌ನ್ನು ಪ್ರದರ್ಶಿಸುವ ಅಥವಾ ಏರ್ ಫೈರಿಂಗ್ ಮಾಡುವ ಸಂಭವವಿದೆ. ಆಯುಧಗಳನ್ನು ಹೊಂದುವುದು ಹುಡುಗಾಟಿಕೆಯಲ್ಲ. ಅದೊಂದು ಜವಾಬ್ದಾರಿ. ಹಾಗೆಯೇ ಇಂತಹ ಆಯುಧಗಳನ್ನು ಹೊಂದಲು ವಯಸ್ಸು, ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆಯೂ ಮುಖ್ಯವಾಗುತ್ತದೆ. 70 ರಿಂದ 75 ವರ್ಷ ಮೇಲ್ಪಟ್ಟವರು ತಾವು ಹೊಂದಿರುವ ಬಂದೂಕು/ಗನ್‌ನ್ನು ಬೇರೆಯವರಿಗೆ ವರ್ಗಾವಣೆ ಮಾಡುತ್ತಾರೆ ಎಂದು ವಿವರಿಸಿದರು.

ಶಿಬಿರದಲ್ಲಿ ತರಬೇತಿ ಪಡೆದಿದ್ದ 102 ಮಂದಿಗೆ ಪ್ರಮಾಣಪತ್ರ ಮತ್ತು ತರಬೇತಿಯ ಅಂತಿಮಘಟ್ಟದಲ್ಲಿ ಫೈರಿಂಗ್ ಸ್ಪರ್ಧೆಯಲ್ಲಿ ಬಳಸಿದ್ದ ಟಾರ್ಗೆಟ್ ಶೀಟ್‌ಗಳನ್ನು ವಿತರಿಸಲಾಯಿತು. ಅತ್ಯುತ್ತಮ ಫೈರಿಂಗ್ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಲಾಯಿತು. ಪ್ರವೀಣ್‌ಸಿಂಗ್(ಪ್ರ), ಅಮಿಲ್ ಉಲ್ಲಾ ಮಾಜ್(ದ್ವಿ), ನವೀನ್ ಚಿಕ್ಕಮಂಡ್ಯ(ತೃ) ಹಾಗೂ ಮಹಿಳೆಯರ ವಿಭಾಗದಲ್ಲಿ ಆರ್.ಅಶ್ವಿನಿ ಅವರಿಗೆ ಉತ್ತಮ ಶೂಟರ್ ಬಹುಮಾನ ವಿತರಿಸಲಾಯಿತು. ಕಾರ‍್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಶಿಬಿರಾರ್ಥಿಗಳಾದ ಜಿ.ಎನ್.ಸಂತೋಷ್‌ಕುಮಾರ್ ಗೊರವಾಲೆ, ಜಿ.ವಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಈ.ಗಂಗಾಧರಸ್ವಾಮಿ, ಮಂಡ್ಯ ಡಿವೈಎಸ್‌ಪಿ ಎಲ್.ಕೆ.ರಮೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಎಸ್.ರಾಚಯ್ಯ, ಆರ್‌ಪಿಐ ಬಿ.ಜಗದೀಶ್, ಆರ್‌ಐಎಸ್‌ಗಳಾ ಮುಲ್ಲಾಸಾಬ್, ಬೆಟ್ಟಸ್ವಾಮಿ, ಎಆರ್‌ಎಸ್‌ಐ ರಘುಮೂರ್ತಿ, ತರಬೇತುದಾರರಾದ ಸತೀಶ್, ಹರೀಶ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!