ವರದಿ : ಪ್ರಭು ವಿ ಎಸ್
ಶಿಂಷಾ ನದಿಯಲ್ಲಿ ತಂದೆಯೊಂದಿಗೆ ಮೀನು ಹಿಡಿಯಲು ಹೋದ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಮದ್ದೂರು ಪಟ್ಟಣದ ಹೊಳೆ ಬೀದಿಯ ಹಳೇ ಮಸೀದಿ ರಸ್ತೆಯ ನಿವಾಸಿ ಅಮ್ಜದ್ ಉಲ್ಲಾ ಖಾನ್ ಅವರ ಪುತ್ರ ಮೊಹೀನ್ ಪಾಷಾ ( 18 ) ಮೃತಪಟ್ಟ ಯುವಕ.
ಬೈಕ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಮೊಹೀನ್ ಪಾಷಾ ನಿನ್ನೆ ಸಂಜೆ 4.30 ರ ಸುಮಾರಿಗೆ ತನ್ನ ತಂದೆ ಅಮ್ಜದ್ ಉಲ್ಲಾ ಖಾನ್ ನೊಂದಿಗೆ ಕೊಲ್ಲಿ ಸರ್ಕಲ್ ಬಳಿಯ ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾನೆ. ಈ ವೇಳೆ ಈತನ ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರು ಕೂಡ ನದಿಯಲ್ಲಿ ಈಜಾಡುತ್ತಿದ್ದರು. ಮೊಹೀನ್ ಪಾಷಾ ಕೂಡ ಈಜಾಡಲು ಹೋದಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ತಂಡ ಮೂಹೀನ್ ಪಾಷಾ ಮೃತ ದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಮದ್ದೂರು ಠಾಣೆಯ ಪಿ ಎಸ್ ಐ ಉಮೇಶ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ಇದ್ದು, ಮೃತದೇಹದ ಪತ್ತೆಗೆ ಸಹಕರಿಸಿದರು.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಲಾಯಿತು.




