ಚಿನ್ನದ ವ್ಯಾಪಾರಿಗಳಿಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರು, 1.24 ಕೋಟಿಗೂ ಹೆಚ್ಚು ಮೊತ್ತದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಇಂದು ಸಂಜೆ 6.30 ರ ಸುಮಾರಿಗೆ ಮಂಡ್ಯ ತಾಲ್ಲೂಕಿನ ಗಂಟಗೌಡನಹಳ್ಳಿ ಮತ್ತು ದ್ಯಾಪಸಂದ್ರ ಗ್ರಾಮದ ದಾರಿ ಮಧ್ಯೆ ನಡೆದಿದೆ.
ಮೈಸೂರಿನ ರಿಷಬ್ ಜ್ಯುವೆಲ್ಲರ್‍ಸ್ ಸಿಬ್ಬಂದಿಗಳಾದ ಮಾತೊರಾಂ ಹಾಗೂ ಲಲಿತ್ ಎಂಬುವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರಿಗೆ ತಲೆಗೆ ಹೊಡೆದು 5 ಕೆ.ಜಿ.ಗೂ ಅಧಿಕ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಮೈಸೂರಿನ ರಿಷಬ್ ಜ್ಯುವೆಲರ್‍ಸ್ ಮಾಲೀಕ ಅಶೋಕ ಎಂಬಾತ ಮಂಡ್ಯ, ಬಸರಾಳು ಜಕ್ಕನಹಳ್ಳಿ,ಕೆರಗೋಡು ಭಾಗದಲ್ಲಿರುವ ಚಿನ್ನಾಭರಣದ ಅಂಗಡಿಗಳಿಗೆ ಆಭರಣ ಪೂರೈಸುವ ಒಡಂಬಡಿಕೆ ಮಾಡಿಕೊಂಡಿದ್ದರು. ಈ ಭಾಗದ ಅಂಗಡಿಗಳಿಗೆ ಚಿನ್ನಾಭರಣ ನೀಡಲು ಎಂದಿನಂತೆ ಇಂದು ಜಕ್ಕನಳ್ಳಿ, ಬಸರಾಳು ಅಂಗಡಿಗಳಿಗೆ ಆಭರಣ ವಿತರಣೆ ಮಾಡಿ ಕೆರಗೋಡಿಗೆ ವಿತರಿಸಲು ಮಂಡ್ಯ-ಬಸರಾಳು ರಸ್ತೆಯಲ್ಲಿ ಬರುತ್ತಿದ್ದರು. ಗಂಟಗೌಡನ ಹಳ್ಳಿಯ ಗೇಟ್ ಬಳಿ ಬರುತ್ತಿದ್ದಾಗ ಎದುರು ರಸ್ತೆಯಲ್ಲಿ ಕಾರಿನಲ್ಲಿ ಬಂದ ನಾಲ್ವರು ಹಾಗೂ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದ್ದಾರೆ.
ಕಾರಿನ ಗಾಜನ್ನು ರಾಡಿನಿಂದ ಹೊಡೆದ ದುಷ್ಕರ್ಮಿಗಳು ಕಾರಿನಲ್ಲಿದ್ದ ಮಾತುರಾಂ ತಲೆಗೆ ಅದೇ ರಾಡಿನಿಂದ ಬಲವಾಗಿ ಥಳಿಸಿದ್ದಾರೆ. ಕಾರಿನಲ್ಲಿದ್ದ ಲಲಿತ್ ಹೊಟ್ಟೆಗೆ ಮತ್ತು ಎದೆಗೆ ಗುದ್ದಿ ಆತನ ಮುಖಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ.


ಘಟನೆಯ ನಂತರ ಸ್ಥಳಿಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ದರೋಡೆಕೋರರಿಂದ ಗಾಯಗೊಂಡಿದ್ದ ಮಾತೂರಾಂ ಹಾಗೂ ಲಲಿತ್ ಅವರು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ಪಡೆದು ಕೆರಗೋಡು ಪೊಲೀಸರಿಗೆ ದರೋಡೆ ಮಾಡಿದ ಬಗ್ಗೆ ದೂರು ನೀಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ವೇಣುಗೋಪಾಲ್, ಡಿವೈಎಸ್ಪಿ ಮಂಜುನಾಥ್,ಎಎಸ್ಪಿ ವೇಣುಗೋಪಾಲ್,ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೇಗೌಡ,ಕೆರಗೋಡು ಪಿಎಸ್ಐ ರಮೇಶ್ ಸೇರಿದಂತೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ ಕೆರಗೋಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ಧು,ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ರಾಮೀಣ ಭಾಗದ ಅಂಗಡಿಗಳಿಗೆ ಹಲವಾರು ವರ್ಷಗಳಿಂದ ಸಣ್ಣ ಓಲೆ, ಮಾಟಿ,ಮೂಗುತಿ,ಉಂಗುರ,ಸರ ಮೊದಲಾದ ಚಿನ್ನಾಭರಣಗಳನ್ನು ಪೂರೈಸುವ ಕೆಲಸವನ್ನು ಮೈಸೂರಿನ ರಿಷಬ್ ಜ್ಯೂವೆಲ್ಲರ್ಸ್ ಮಾಲೀಕರು ವೃತ್ತಿ ಮಾಡಿಕೊಂಡಿದ್ದರು.ಇದನ್ನು ಗಮನಿಸಿರುವ ದುಷ್ಕರ್ಮಿಗಳು ಇಂದು ಪ್ಲಾನ್ ಮಾಡಿಕೊಂಡು ಚಿನ್ನಾಭರಣ ದರೋಡೆ ಮಾಡಿರಬಹುದು ಎಂಬ ಶಂಕೆಯನ್ನು ಪೋಲಿಸರು ವ್ಯಕ್ತಪಡಿಸಿದ್ದು,ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
ಇದನ್ನು ಓದಿ : ಚಿನ್ನಾಭರಣ ಲೂಟಿಕೋರರ ಬಂಧನ