Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆ ಹೆಚ್ಚಿನ ಜನಪದ ಸಂಸ್ಕೃತಿ ಹೊಂದಿದೆ: ಬೋರಲಿಂಗಯ್ಯ

ಬಿಜಾಪುರ (ವಿಜಯಪುರ) ಜಿಲ್ಲೆಯ ನಂತರ ಅತೀ ಹೆಚ್ಚು ಜನಪದ ಕಲೆಗಳನ್ನು ಹೊಂದಿರುವ ಹೆಮ್ಮೆ ಮಂಡ್ಯ ಜಿಲ್ಲೆಯದ್ದಾಗಿದ್ದು, ಹೆಚ್ಚಿನ ಜನಪದ ಸಂಸ್ಕೃತಿಯನ್ನು ಹೊಂದಿದೆ. ಜಿಲ್ಲೆಯು ಜನಪದಗಳ ತವರಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಧ್ಯಕ್ಷ ಹಾಗೂ ಹಂಪಿ ಕನ್ನಡ ವಿ. ವಿ. ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಇಲ್ಲಿ ನಡೆದ ಜಾನಪದ ಜಾತ್ರೆ – 2024 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.

ಕವಿರಾಜ ಮಾರ್ಗ ಕಾವ್ಯದಲ್ಲಿರುವ ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ಮಾತಿನಂತೆ ಹಿಂದಿನ ಕಾಲದಲ್ಲಿದ್ದ ನಮ್ಮ ಪೂರ್ವಜರುಗಳು ಯಾವುದೇ ವಿದ್ಯಾಭ್ಯಾಸವನ್ನು ಪಡೆಯದೇ, ಓದಲು, ಬರೆಯಲು ಬರದೆ ಇದ್ದರೂ ಕೂಡ ಅನೇಕ ಜನಪದ ಕಾವ್ಯಗಳನ್ನು ರಚಿಸಿದ್ದಾರೆ. ಅವರು ಜನಪದ ಕಲೆಗಳನ್ನು ಪ್ರದರ್ಶನ ಮಾಡುವಲ್ಲಿ ಪರಿಣಿತರು ಸಹ ಆಗಿದ್ದರು ಎಂದರು.

ಜನಪದ ಕಲೆಗಳಲ್ಲಿ ಮುಂಚೂಣಿ

ಕರ್ನಾಟಕದಲ್ಲಿ ಇಲ್ಲಿಯವರೆಗೆ ಸುಮಾರು 186 ಜನಪದ ಕಲೆಗಳು ಸಿಕ್ಕಿದ್ದು, ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಜನಪದ ಕಲೆಗಳಿರುವ ನಾಡು ಕರ್ನಾಟಕ ರಾಜ್ಯವಾಗಿದೆ. ಕನ್ನಡ ಭಾಷೆಯಲ್ಲಿ ಸಿಕ್ಕಿರುವಷ್ಟು ಜನಪದ ಕಲೆಗಳು ಬೇರೆ ಯಾವ ಭಾಷೆಯಲ್ಲೂ ಕೂಡ ಸಿಕ್ಕಿಲ್ಲ. ಆದ್ದರಿಂದ ನಮ್ಮ ರಾಜ್ಯವು ಜನಪದ ಕಲೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಮೈಸೂರು ಸಂಸ್ಕೃತಿ ಚಿಂತಕರು ಹಾಗೂ ಪ್ರಸಿದ್ದ ವಾಗ್ಮಿ ಪ್ರೊ. ಎಂ. ಕೃಷ್ಣೆಗೌಡ ಮಾತನಾಡಿ, ಭತ್ತ – ರಾಗಿಯ ರಾಶಿ ಪೂಜೆ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನು ವಿದ್ಯಾರ್ಥಿಗಳು ಅತೀ ಹೆಚ್ಚು ಬಳಸುತ್ತಿದ್ದು, ಅದನ್ನು ಕಡಿಮೆ ಮಾಡಬೇಕು ಎಂದರು.

ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ಆಹಾರ, ಬಟ್ಟೆ ಇತ್ಯಾದಿ ಮೂಲಭೂತ ಅಂಶಗಳಲ್ಲಿ ವಿದೇಶಿಯ ಶೈಲಿಯನ್ನು ಅನುಸರಿಸುತ್ತಿದ್ದು, ಅವುಗಳು ನಮ್ಮ ಆರೋಗ್ಯ ಮತ್ತು ಸಂಸ್ಕೃತಿಗೆ ಒಳ್ಳೆಯದಲ್ಲ. ಆದ್ದರಿಂದ ದೇಸಿ ಉತ್ಪನ್ನಗಳನ್ನು ಬಳಸಬೇಕು. ಜಾನಪದ ಜಾತ್ರೆ ಕಾರ್ಯಕ್ರಮದಂತಹ ಇನ್ನಷ್ಟು ದೇಸಿಯ ಹಬ್ಬಗಳು ನಡೆಯಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವಂತಹ ಕೆಲಸಗಳು ಆಗಬೇಕು ಎಂದರು.

ಐಕ್ಯತೆ ಮೂಡಿಸುತ್ತದೆ

ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ. ಕುಮಾರ್ ಬೆಳಲೆ ಅವರು ಪ್ರಾಸ್ತವಿಕ ಮಾತನಾಡಿ, ಜಾತ್ರೆಗಳು ನಮ್ಮಲ್ಲಿ ಸುಸಂಸ್ಕೃತಿಯನ್ನು ಬಿತ್ತುತ್ತವೆ. ಜಾತ್ರೆಗಳಿಗೆ ಯಾವುದೇ ಲಿಂಗ, ಜಾತಿಯ ಬೇಧವಿಲ್ಲದೆ ಎಲ್ಲರಲ್ಲಿಯೂ ಐಕ್ಯತೆ ಮೂಡಿಸುತ್ತದೆ. ನಮ್ಮ ಕಾಲೇಜು ದೇಶಿಯತೆಗೆ ಹೆಸರನ್ನು ಪಡೆದುಕೊಂಡಿದ್ದು, ತಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸುವ ಪ್ರಯತ್ನ ಮಾಡುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಜಾನಪದ ಜಾತ್ರೆಯ ಸಹ ಸಂಚಾಲಕರು ಡಾ. ಕೆಂಪಮ್ಮ ಎಂ. ಮತ್ತು ತಂಡದವರು ಜಾನಪದ ಹಾಡನ್ನು ಹೇಳುತ್ತಾ, ರಾಗಿಬೀಸುವ ಮೂಲಕ ಚಾಲನೆ ನೀಡಿದರು. ಜಾನಪದ ವಸ್ತುಗಳ ವಸ್ತು ಪ್ರದರ್ಶನ ಹಾಗೂ ದೇಸಿ ತಿಂಡಿ – ತಿನಿಸುಗಳನ್ನೊಳಗೊಂಡ ಆಹಾರ ಮಳಿಗೆ (ಸ್ಟಾಲ್)ಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.

ಕಲಾ ತಂಡಗಳಿಂದ ಕಾರ್ಯಕ್ರಮ

ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂತೋಷಪಟ್ಟರು. ಕಾಲೇಜಿನ ಮೈದಾನದಿಂದ ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ವೀರಗಾಸೆ ಸೇರಿದಂತೆ 5 ಕ್ಕೂ ಹೆಚ್ಚು ಕಲಾ ತಂಡಗಳಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಎತ್ತಿನಗಾಡಿಯ ಮೆರವಣಿಗೆಯಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಿಂಚಿದರು. ಇನ್ನುಳಿದ ವಿದ್ಯಾರ್ಥಿಗಳು ಕುಂಭ ಹಿಡಿದು ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಬುಜ್ಜಣಿಗೆ ಬುಟ್ಟಿ ಲಕ್ಕಿ ಡ್ರಾದಲ್ಲಿ ವಿಜೇತರಾದ ವಿದ್ಯಾರ್ಥಿನಿ ಹಾಗೂ ಅಧ್ಯಾಪಕರುಗಳಿಗೆ ಬುಜ್ಜಣಿಗೆ ಬುಟ್ಟಿಯನ್ನು ವಿತರಿಸಿದರು. ತದನಂತರ ಜಾನಪದ ಚೆಲುವೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಅಲಂಕೃತಗೊಂಡ ಎತ್ತಿನ ಗಾಡಿ ಮೆರವಣಿಗೆ ಸ್ಪರ್ಧೆ, ಗಾದೆ ಹೇಳಿ ಒಗಟು ಬಿಡಿಸಿ ಹಾಗೂ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತಾ ) ಪ್ರಾಂಶುಪಾಲರಾದ ಡಾ.ಕೆ. ಹೇಮಲತಾ, ಖಜಾಂಚಿ ಡಾ. ಜ್ಯೋತ್ಸ್ನಾ ಕಾರಂತ್, ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಕೆ. ಪಿ ಸೇರಿದಂತೆ ಇನ್ನಿತರೆ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!