-
ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮ
- ಪಡಿತರ ಚೀಟಿದಾರರ ಬಯೋಮೆಟ್ರಿಕ್ ಪಡೆದು ಆಹಾರ ಪದಾರ್ಥ ವಿತರಿಸದೇ ವಂಚನೆ
ಮಂಡ್ಯ ತಾಲೂಕಿನ ತಗ್ಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗ್ರಾಮದ ಪಡಿತರ ಚೀಟಿದಾರರಿಗೆ ಹಂಚಬೇಕಾಗಿದ್ದ ಆಹಾರ ಪದಾರ್ಥಗಳನ್ನು ಪಡಿತರ ಚೀಟಿದಾರರಿಗೆ ವಂಚಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರೆನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ.
ಪಡಿತರ ಚೀಟಿದಾರರ ಬಯೋಮೆಟ್ರಿಕ್ ಪಡೆದು ವಿತರಣಾ ರಶೀದಿ ನೀಡಿ ಸಂಘದ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಯು ಪಡಿತರ ನೀಡದೇ ಸಬೂಬು ಹೇಳಿ ಕಳುಹಿಸಿ ಸಂಘದಲ್ಲಿ ಉಳಿದ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುವ ಮೂಲಕ ಪಡಿತರ ಚೀಟಿದಾರರನ್ನು ವಂಚಿಸಿದ್ದಾರೆಂದು ಗ್ರಾಮದ ಪಡಿತರದಾರರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.

ಪ್ರತಿ ತಿಂಗಳು 25 ರಿಂದ 30 ಪಡಿತರ ಚೀಟಿದಾರರಿಗೆ ಮೋಸ ಮಾಡಿದ್ದು, ಈ ರೀತಿ ಕಳೆದ ಆರು ತಿಂಗಳಿಂದ ವಂಚನೆ ಮಾಡಿಕೊಂಡು ಬರಲಾಗಿದೆ. ಅಂತಿಮ ಶಿಲ್ಕು 48 ಕ್ವಿಂಟಾಲ್ ಪಡಿತರ ವಿತರಣೆ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಆರು ತಿಂಗಳಲ್ಲಿ 250 ಪಡಿತರದಾರರಿಗೆ ವಂಚಿಸಿದ್ದು ಅಂದಾಜು 4.50 ಲಕ್ಷ ಮೌಲ್ಯದ ಸುಮಾರು 100 ರಿಂದ 150 ಕ್ವಿಂಟಾಲ್ ಪಡಿತರವನ್ನು ವಿತರಿಸದೆ ಮೋಸ ಮಾಡಲಾಗಿದೆ ಎಂದು ದೂರಲಾಗಿದೆ.
ಪಡಿತರ ನೀಡದೆ ವಂಚಿಸಿರುವ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಸಬೂಬು ಹೇಳಿ ವಂಚನೆ
ತಗ್ಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಚೀಟಿ ನೊಂದಣಿಯಾಗಿದ್ದು ಪಡಿತರ ಆಹಾರ ಪದಾರ್ಥಗಳನ್ನು ಸಂಘದಿಂದ ಪಡೆಯಬೇಕಾಗಿದೆ. ಆದರೆ ಸಂಘದ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸಿದ್ದರಾಜು ಪಡಿತರ ಪಡೆಯಲು ಹೋದಾಗ ಬಯೋಮೆಟ್ರಿಕ್ ತೆಗೆದುಕೊಂಡು ವಿತರಣಾ ರಶೀದಿಯನ್ನು ನೀಡಿ, ಪಡಿತರ ಪದಾರ್ಥ ಇನ್ನೂ ಬಂದಿಲ್ಲ, ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ, ಮತ್ತೆ ಕೇಳಲು ಹೋದರೆ ಮುಂದಿನ ತಿಂಗಳು ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಕೊಡುತ್ತೇವೆ ಎಂದು ಇಲ್ಲ ಸಲ್ಲದ ಸಬೂಬು ಹೇಳಿ ಪಡಿತರ ನೀಡದೆ ವಂಚನೆ ಮಾಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಡಿತರವನ್ನು ಬಡವರಿಗೆ ನೀಡದೇ ವಂಚಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದು,ಕಾಳಸಂತೆ ಯಿಂದ ಬಂದ ಹಣವನ್ನು ಸಂಘದ ಅಧ್ಯಕ್ಷ ಹೆಚ್.ಎಂ.ಸಿದ್ದರಾಜು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಂಚಿಕೆ ಮಾಡಿಕೊಂಡು ಅರ್ಹ ಪಡಿತರ ಚೀಟಿದಾರರಿಗೆ ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.
ಇಲಾಖೆಯ ಆಯುಕ್ತರು ಖುದ್ದಾಗಿ ಪರಿಶೀಲನೆ ಮಾಡಿ, ಪಡಿತರದಾರರಿಗೆ ವಂಚಿಸುತ್ತಿರುವ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅದೇ ರೀತಿ ಬಡ ಜನತೆಗೆ ವಂಚನೆಯಾಗದ ರೀತಿ ಸಕಾಲದಲ್ಲಿ ಪಡಿತರ ವಿತರಸುವಂತೆ ಮನವಿ ಮಾಡಲಾಗಿದೆ.
ದೂರಿನ ಪತ್ರದಲ್ಲಿ ಯಶವಂತ್, ನಾಗಯ್ಯ, ರಮೇಶ್, ಟಿ.ಎಂ.ಸಿದ್ದೇಗೌಡ ಸೇರಿದಂತೆ ಇನ್ನು ಹಲವರು ಸಹಿ ಮಾಡಿದ್ದಾರೆ.




