ಮಂಡ್ಯದ ಸ್ವರ್ಣ ಫುಟ್ ಬಾಲ್ ಅಭಿವೃದ್ದಿ ಸಂಸ್ಥೆ, ಮಂಡ್ಯ ಜಿಲ್ಲಾ ಫುಟ್ ಬಾಲ್ ಸಂಸ್ಥೆ-ಪೂರ್ವ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಅ.8ರಿಂದ 15 ರವರೆಗೆ ಮುನ್ನ ಕಪ್ ಫುಟ್ ಬಾಲ್ ಪಂದ್ಯಾವಳಿ ಆಯೋಜನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ನಾಗರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ನಗರದ ಗುತ್ತಲು ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಬಿ.ಜಿ.ದಾಸೇಗೌಡ ಕ್ರೀಡಾಂಗಣದಲ್ಲಿ ಅ.8ರಂದು ಸಂಜೆ 4 ಗಂಟೆಗೆ ಶಾಸಕ ಎನ್.ಎ.ಹ್ಯಾರಿಸ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಸಮಾರಂಭದ ಅಧ್ಯಕ್ಷತೆ ನಾಗರಾಜು ವಹಿಸುಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಪಿ.ರವಿಕುಮಾರ್ ಗೌಡ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಓಂ ಪ್ರಕಾಶ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಅ.15ರಂದು ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಹುಮಾನ ವಿತರಿಸಲಿದ್ದು, ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಮಾರೋಪ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ತನ್ವೀರ್ ಸೇಠ್, ರವಿಕುಮಾರ್ ಗೌಡ, ರಾಜ್ಯ ಫುಟ್ಬಾಲ್ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಕುಮಾರ್, ಖಜಾಂಚಿ ಬಿ.ಕೆ.ಮುನಿರಾಜ್ ಉಪಸ್ಥಿತರಿರುವರು ಎಂದರು.
ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, ಪ್ರತಿ ದಿನ 2 ಪಂದ್ಯಾವಳಿಯಂತೆ 8 ದಿನ ಕ್ರೀಡಾಕೂಟ ನಡೆಯಲಿದ್ದು, ವಿಜೇತ ಪ್ರಥಮ ತಂಡಕ್ಕೆ 25 ಸಾವಿರ ರೂ, ದ್ವಿತೀಯ ತಂಡಕ್ಕೆ 15 ಸಾವಿರ ರೂ.ನಗದು ಪುರಸ್ಕಾರ ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ದಿನ ಭತ್ಯೆ ಹಾಗೂ ಪ್ರವಾಸ ಭತ್ಯೆ ನೀಡಲಾಗುವುದೆಂದು ತಿಳಿಸಿದರು.
ಗೋಷ್ಟಿಯಲ್ಲಿ ಉಪಾಧ್ಯಕ್ಷ ಮುನಾವರ್ ಪಾಷ, ಕಾರ್ಯದರ್ಶಿ ವೇಣುಗೋಪಾಲ್, ವಿಶೇಷ ಪ್ರತಿನಿಧಿ ಬಿ.ವೆಂಕಟ್, ಟಿ.ವರಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.




