Saturday, May 25, 2024

ಪ್ರಾಯೋಗಿಕ ಆವೃತ್ತಿ

ವಿಪತ್ತು ನಿರ್ವಹಣೆಗೆ ಮುಂಜಾಗ್ರತಾ ಕ್ರಮ ಅಗತ್ಯ : ಎಸ್.ಅಶ್ವತಿ

ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಅಗ್ನಿಶಾಮಕದಳ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಉಂಟಾದ ಸಂದರ್ಭದಲ್ಲಿ ವಹಿಸಬೇಕಾಗಿರುವ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ತಾಲ್ಲೂಕು ಆಡಳಿತ ಎನ್.ಡಿ.ಆರ್.ಎಫ್. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಇಲಾಖೆಗಳ ಸಹಯೋಗದೊಂದಿಗೆ ಪಾಂಡವಪುರ ಕೆರೆ ತೊಣ್ಣೂರಿನಲ್ಲಿ ನಡೆದ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಬೆಂಕಿ ಅವಗಡ, ಪ್ರವಾಹದಂತಹ ಘಟನೆಗಳು ಘಟಿಸಿದಾಗ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳ ತುರ್ತಾಗಿ ಆಗಮಿಸಿ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಅಗ್ನಿ ಶಾಮಕ ದಳಕ್ಕೆ ಬೇಕಿರುವ ಉಪಕರಣಗಳನ್ನು ಜಿಲ್ಲಾಡಳಿತದಿಂದ ಸರಬರಾಜು ಮಾಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಪ್ರಾಣಹಾನಿ, ಜಾನುವಾರು, ಆಸ್ತಿ ಸಂರಕ್ಷಣೆಯನ್ನು ಮಾಡಲು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಿಸಲುಸಿದ್ಧವಿದೆ ಎಂದರು.

ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬಂದರು ಸಹ ರಕ್ಷಣೆ ಮಾಡುವುದಕ್ಕೆ ಸಿದ್ಧರಾಗಿರಬೇಕು. ಸ್ಥಳೀಯವಾಗಿ ತುರ್ತು ಪರಿಸ್ಥಿತಿಯಲ್ಲಿ ಉಪಕರಣಗಳನ್ನು ಬಳಸಿ ಯಾವ ರೀತಿ ರಕ್ಷಣೆ ಮಾಡಬಹುದು ಎಂಬ ಮಾಹಿತಿ ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದವರು ಅಣುಕು ಪ್ರದರ್ಶನ ನೀಡಿದ್ದಾರೆ. ವಿಪತ್ತು ನಿರ್ವಹಣೆ ಕುರಿತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದರು.

ವಿಪತ್ತುಗಳನ್ನು ಮೊದಲೇ ಗುರುತಿಸಿ ವಿಪತ್ತಿನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಬೇಕಿರುವ ಸಲಕರಣೆ ಹಾಗೂ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿಪತ್ತಿನ ಸಂದರ್ಭದಲ್ಲಿ ಅಧಿಕಾರಿಗಳು ಮೊದಲು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎನ್ ಡಿ ಆರ್ ಎಫ್ ತಂಡದವರು ವಿವರಿಸಿದರು.

ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದವರು ನೀರಿನಲ್ಲಿ ಬಿದ್ದಂತಹ ವ್ಯಕ್ತಿಯನ್ನು ಪ್ರಾಣ ಹಾನಿಯಿಂದ ತಪ್ಪಿಸಲು ಪ್ರಥಮ ಹಂತದಲ್ಲಿ ಕೃತಕವಾಗಿ ಮನೆ ಬಳಕೆಯ ವಸ್ತುಗಳಾದ ನೀರಿನ ಬಾಟಲ್, ಒಣ ತೆಂಗಿನಕಾಯಿ, ಥರ್ಮಾಕೊಲ್, ಪ್ಲಾಸ್ಟಿಕ್ ಬಿಂದಿಗೆಗಳು ಇನ್ನಿತರ ವಸ್ತುಗಳನ್ನು ಬಳಸಿ ಆಪತ್ತಿನಿಂದ ಪಾರಾಗಬಹುದಾದ ವಿಧಾನಗಳನ್ನು ಪ್ರಾಯೋಗಿಕ ಪ್ರದರ್ಶನದ ಮೂಲಕ ತಿಳಿಸಿದರು.

ಗಣಪತಿ ವಿಸರ್ಜನೆ, ಪ್ರವಾಹ ಉಂಟಾದ, ಈಜಲು ಹೋಗಿ ಮುಳುಗಿದ ಅಥವಾ ಇನ್ನಿತರ ಸಂದರ್ಭದಲ್ಲಿ ಅನೇಕ ಅನಾಹುತವಾಗುವ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಿಕೊಂಡು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಸಿದರು.

ಇದೇ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ಗುರುರಾಜ್ ರವರು ಮಾತನಾಡಿ ಹೈಡ್ರಾಲಿಕ್ ಕಟ್ಟರ್, ಹೈಡ್ರಾಲಿಕ್ ಸ್ಪ್ರೇಡರ್, ಪೆಟ್ರೋಲ್ ಚೈನ್ಸರ್, ಡ್ಯಮಲಿಷನ್ ಹ್ಯಾಮರ್, ಕಂಟ್ರೋಲ್ ಚೈನ್ಸ್, ಮಲ್ಟಿಪರ್ಪಸ್ ಕಬ್ಬಿಣ ಮತ್ತು ಮರಳನ್ನು ತುಂಡರಿಸುವ ಸಾಮರ್ಥ್ಯವಿದೆ.

ಎಲೆಕ್ಟ್ರಿಕಲ್ಸ್ ಚೈನಿ ಕಟ್ಟರ್, ಮೆಟಲ್ ಕಟ್ಟರ್, ಕಾಂಕ್ರೀಟ್ ಕಟರ್, ಬ್ಯಾಟರಿ ಆಪರೇಷನ್ ಸ್ಪ್ರೇಡರ್, ಗ್ರಾಫ್ ನಲ್ಸ್ (ಪಾತಾಳದ ಗರುಡ), ಲೈಟ್ ಜಾಕೆಟ್, ಹಾಗೂ ವಾಟರ್ ಟೆಂಡರ್ ಮೀಡಿಯಂ ರೆಸ್ಕ್ಯೂ ವ್ಯಾನ್, ಕೈಕ್ ರೆಸ್ಪಾನ್ಸ್ ವ್ಯಾನ್, 108 ಅಡಿ ಮೇಲೆ ಕಾರ್ಯಾಚರಣೆ ನಡೆಸುವ ಬ್ರೋನ್ ಟೋ ಸ್ಕೈಲಿಫ್ಟ್ ವ್ಯವಸ್ಥೆ ವಿಪತ್ತು ನಿರ್ವಹಿಸಿದ ಸಂದರ್ಭದಲ್ಲಿ ಬಳಸುವಂತಹ ಉಪಕರಣಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಜಿ.ಆರ್.ಜೆ. ದಿವ್ಯಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ಯತೀಶ್, ಗೃಹ ರಕ್ಷಕ ದಳದ ಎನ್. ವೆಂಕಟೇಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಪಾಂಡವಪುರ ತಹಶಿಲ್ದಾರ್ ನಯನ, ಎನ್.ಡಿ.ಆರ್.ಎಫ್ ಇನ್ಸ್‍ಪೆಕ್ಟರ್ ವೇಲೂರು ರಮೇಶ್, ಎನ್.ಡಿ.ಆರ್.ಎಫ್ ಸಂಯೋಜಕ ವಿಜಯ್ ಕುಮಾರ್ ಜಿ, ನೆಹರು ಯುವ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ಹೆಚ್. ಎಂ ಬಸವರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!