ಚಿನ್ನದ ದರ ದುಬಾರಿಯಾಗಿರುವ ಕಾಲದಲ್ಲಿ ಯುವಕನೊಬ್ಬನಿಗೆ 1.50 ಲಕ್ಷ ಮೌಲ್ಯದ ಚಿನ್ನಾಭರಣ ಸಿಕ್ಕಿದ್ದರೂ ಅದನ್ನು ತನ್ನ ಬಳಿ ಇಟ್ಟುಕೊಳ್ಳದೆ, ವಾರಸುದಾರರಿಗೆ ಮರಳಿಸುವಂತೆ ಸರವನ್ನು ನಾಗಮಂಗಲ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಮೈಸೂರಿನ ಟ್ರ‍್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಚಂದ್ರಶೇಖರ್ ಎಂಬಾತನ ಪ್ರಾಮಾಣಿಕತೆಯಿಂದ ಚಿನ್ನದ ಸರ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದವರಿಗೆ ಮತ್ತೆ ಸರ ಸಿಗುವಂತಾಗಿದೆ.
ಚಂದ್ರಶೇಖರ್ ನಿನ್ನೆ ಕುಟುಂಬಸ್ಥರ ಜೊತೆ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದ.ಮದುವೆ ಮುಗಿಸಿಕೊಂಡು ರೂಮ್‌ಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಬೀದಿ ದೀಪಕ್ಕೆ ಹೊಳೆಯುತ್ತಿದ್ದ ವಸ್ತುವೊಂದು ಚಂದ್ರಶೇಖರ್ ಕಣ್ಣಿಗೆ ಬಿದ್ದಿದೆ. ಹತ್ತಿರ ಹೋಗಿ ನೋಡಿದಾಗ ಅದು ಚಿನ್ನದ ಸರವಾಗಿತ್ತು. ರಾತ್ರಿ ಆಗಿದ್ದರಿಂದ ಚಂದ್ರಶೇಖರ್ ಅದನ್ನು ರೂಮ್‌ಗೆ ತೆಗೆದುಕೊಂಡು ಹೋಗಿದ್ದಾನೆ.
ಬೆಳಗ್ಗೆ ಎದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೋಲಿಸರಿಗೆ ಒಪ್ಪಿಸಿ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ. ಚಂದ್ರಶೇಖರ್‌ನ ಪ್ರಾಮಾಣಿಕತೆಗೆ ನಾಗಮಂಗಲ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.