Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಗೆ ಚಲುವರಾಯಸ್ವಾಮಿಯಿಂದ ದ್ರೋಹವಾಗಿದೆ : ರವೀಂದ್ರ ಶ್ರೀಕಂಠಯ್ಯ

ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ನೀಡಿದ 8000 ಕೋಟಿ ರೂ. ಅನುದಾನ ವಾಪಸ್ ಹೋಗಲು ಚಲುವರಾಯಸ್ವಾಮಿಯವರೇ ಮುಖ್ಯ ಕಾರಣ. ಬಿಜೆಪಿ ಜೊತೆ ಶಾಮೀಲಾಗಿ ಅನುದಾನ ವಾಪಸ್ ಹೋಗುವಂತೆ ಮಾಡಿದ ಚಲುವರಾಯಸ್ವಾಮಿ ಜಿಲ್ಲೆಗೆ ಬಗೆದ ದ್ರೋಹ ಎಂತಹದ್ದು ಎಂದು ಅವರನ್ನೇ ಕೇಳಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಮಂಡ್ಯ ತಾಲೂಕಿನ ಸಂತೆಕಸಲಗೆರೆಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೆಚ್‌.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂಬುದಾಗಿ ಚಲುವರಾಯಸ್ವಾಮಿ ಹೇಳಬೇಕಾದ್ದೇ. ಬಡವರ ಕಷ್ಟ ಕೇಳುವ, ಬಡವರ ಸಾಲ ಮನ್ನಾ ಮಾಡುವ ನಾಯಕನ ಬಗ್ಗೆ ಅವರು ಆ ರೀತಿ ಮಾತನಾಡಲೇಬೇಕು. ಮಂಡ್ಯ ಜಿಲ್ಲೆಯಲ್ಲಿ ಇಂದಿಗೂ ಕೂಡ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನೀಡಿದ ಅನುದಾನಗಳೇ ಕಾರಣ. ಅದನ್ನು ನಾವು ಅಧಿಕಾರಿಗಳ ಜೊತೆ ಗುದ್ದಾಡಿ ತರುತ್ತಿದ್ದೇವೆ. ಹಸಿರು ಟವೆಲ್ ಹಾಕಿಕೊಂಡು ಅಧಿಕಾರಕ್ಕೆ ಬಂದ ನಾಯಕರು ಬಡವರಿಗೆ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.

ಸರ್ಕಾರಕ್ಕೆ ಜವಾಬ್ದಾರಿ ಇಲ್ಲ

ವಿಶ್ವವಿಖ್ಯಾತ ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ 20 ದಿನಗಳಾದರೂ ಇನ್ನೂ ಚಿರತೆಯನ್ನು ಹಿಡಿದಿಲ್ಲ. ಈ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ ಇಲ್ಲ. ಚಿರತೆ ಹಿಡಿಯಲು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಕೆಆರ್‌ಎಸ್ ವರ್ಚಸ್ಸು ಒಂದು ಬಾರಿ ಹೋದರೆ ಮತ್ತೆ ಸರಿ ಮಾಡುವುದು ಸುಲಭವಿಲ್ಲ. ಸರ್ಕಾರ ಸರಿಯಾದ ತೀರ್ಮಾನ ಮಾಡಿ ಚಿರತೆ ಹಿಡಿಯಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡುವುದಾಗಿ ತಿಳಿಸಿದರು.

ಕೆಡಿಪಿ ಸಭೆ ನಡೆಸಿಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮತ್ತು ಸಚಿವ ನಾರಾಯಣಗೌಡರಿಗೆ ಮಂಡ್ಯ ಜಿಲ್ಲೆ ಎಂದರೆ ಕೆ.ಆರ್. ಪೇಟೆ ತಾಲೂಕು ಎಂದು ಭಾವಿಸಿದ್ದಾರೆ. ಅಲ್ಲಿಂದ ಹೊರಬರಲು ಅವರಿಗೆ ಆಗಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಅವರ ಕಣ್ಣಿಗೆ ಕಾಣುತ್ತಿಲ್ಲ. ಕೇವಲ ಕೆ.ಆರ್. ಪೇಟೆಯಲ್ಲಿ ಮಾತ್ರ ಕೆಲಸಗಳು ನಡೆಯುತ್ತಿದೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆದು ಆರು ತಿಂಗಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಡಿಪಿ ಸಭೆ ಕರೆಯುವಂತೆ ಹಲವು ಬಾರಿ ಮನವಿ ಮಾಡಿದರು ಇನ್ನೂ ಕರೆದಿಲ್ಲ. ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಕರೆದು ಒಂದು ತಿಂಗಳಾಗಿದೆ. ಅಧಿಕಾರಿಗಳನ್ನು ಹೇಳೋರು ಕೇಳೋರಿಲ್ಲದೆ ಅವರು ಆಡಿದ್ದೇ ಆಟವಾಗಿದೆ. ಜೆಡಿಎಸ್ ಶಾಸಕರು ಗಲಾಟೆ ಮಾಡಿ ಟೆಂಡರ್ ಮಾಡಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಂತೆಕಸಲಗೆರೆ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ ನಟರಾಜು, ಸದಸ್ಯರಾದ ಬಸವರಾಜು (ಸೋಡಿ) ಕೆ.ಬಿ.ರವೀಶ್, ಶಿವಲಿಂಗಶೆಟ್ಟಿ, ಸೌಮ್ಯ ರಾಜೇಶ್, ಪಾರ್ವತಮ್ಮ, ಸಾಕಮ್ಮ, ಲಕ್ಷ್ಮಿ, ಮಮತ, ಮಾಜಿ ಅಧ್ಯಕ್ಷ ಲಿಂಗಣ್ಣ, ಗುತ್ತಿಗೆದಾರರಾದ ನರೇಂದ್ರ, ನಟರಾಜು, ಮುಖಂಡರಾದ ರಾಕೇಶ್, ಅಂಗಡಿ ಶಂಕರಣ್ಣ, ಪಾಪಣ್ಣ, ಕೆಆರ್‌ಐಡಿಎಲ್ ಎಇಇ ಸೋಮಶೇಖರ್. ಎಇ ರಾಜೇಂದ್ರ, ಇಂಜಿನಿಯರ್ ರಾಹುಲ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!