Friday, September 20, 2024

ಪ್ರಾಯೋಗಿಕ ಆವೃತ್ತಿ

ಶಾಲೆಯ ಆಚೆಗಿನ ಜ್ಞಾನಕ್ಕೂ ಆದ್ಯತೆ ಇರಲಿ-ಸತೀಶ್ ಜವರೇಗೌಡ

ಪ್ರಸ್ತುತ ವಿದ್ಯಾರ್ಥಿಗಳು, ಪಠ್ಯ ವಿಷಯಗಳ ಓದಿನ ಒತ್ತಡದಲ್ಲಿ ಸಿಲುಕಿದ್ದಾರೆ, ಇದರಿಂದಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳತ್ತ ಅವರ ಮನಸ್ಸು ವಾಲುತ್ತಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ಶಾಲೆಯ ಆಚೆಗಿನ ಜ್ಞಾನ ಗಳಿಸಲು ಆದ್ಯತೆ ನೀಡಬೇಕೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಸಲಹೆ ನೀಡಿದರು.

ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯ ವತಿಯಿಂದ ಆಯೋಜಿಸಲಾಗಿದ್ದ ‘ಮೆಲ್ಲಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ’ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ, ಸಹ ಪಠ್ಯ ಚಟುವಟಿಕೆಗಳ ಕುರಿತು ಒಲವು  ಮೂಡಿಸುವ ಕೆಲಸವನ್ನು ಶಿಕ್ಷಕರೆಲ್ಲ ಬದ್ಧತೆಯಿಂದ ಮಾಡಬೇಕು, ಶಿಕ್ಷಕ ಸಮುದಾಯ, ಪೋಷಕ ವರ್ಗ ಮಕ್ಕಳಿಗೆ ಪ್ರೇರಣೆ, ಉತ್ತೇಜನ ನೀಡಿ ಕಲಾ ವಿಚಾರಗಳಲ್ಲಿ ಆಸಕ್ತಿ ಮೂಡುವಂತಹ ವಾತಾವರಣ ಕಲ್ಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಶಾಂತ ಮಾತನಾಡಿ, ನಾವು ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇರಲಿಲ್ಲ. ಆದರೆ, ಇಂದು ವಿದ್ಯಾರ್ಥಿಗಳ ಪ್ರತಿಭೆಯ ಹೊರ ತೆಗೆಯಲು ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯುತ್ತಿವೆ ಇದು ಉತ್ತಮ ಬೆಳವಣಿಗೆ ಎಂದರು.

ವಿಶೇಷ ಚೇತನರ ಸಂಪನ್ಮೂಲ ಶಿಕ್ಷಕ ಸಿದ್ದಲಿಂಗಯ್ಯ ಮಾತನಾಡಿ, ಕೊರೋನ ಕಾರಣದಿಂದ ಎರಡು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆಗಳು ಜರುಗಿರಲಿಲ್ಲ. ಈ ವರ್ಷ ಎಲ್ಲಾ ಸಹಪಠ್ಯ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ‌ ಎಂದು ಹೇಳಿದರು.

ವೇದಿಕೆಯಲ್ಲಿ ಮೆಲ್ಲಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪಿ.ಕೆ. ದೀಪು, ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ.ಪುಷ್ಪಲತಾ, ತಾಲ್ಲೂಕು ಪ್ರಾ.ಶಾ.ಶಿ. ಸಂಘದ ವರುಣ ಹೋಬಳಿ ಕಾರ್ಯದರ್ಶಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆ, ಗಾಯನ, ಲಘು ಸಂಗೀತ, ಭಾಷಣ, ಆಶುಭಾಷಣ, ವೇಷಭೂಷಣ, ಪದ್ಯ ಕಂಠಪಾಠ, ಕ್ಲೇ ಮಾಡೆಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ನೀಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!