Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಡಿನ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿದ್ದು ಅರಸು -ಆರ್.ಅಶೋಕ್

ಕನ್ನಡ ನಾಡಿನ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು, ಅಂದು 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಮರಿಸಿದರು.

ಮಂಡ್ಯ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಇತಿಹಾಸ ಅಪಾರ ವಿಶಾಲವಾದುದು. ಕದಂಬರು, ರಾಷ್ಟ್ರಕೂಟರು, ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರಿನ ಒಡೆಯರಂತಹ ರಾಜ ಮನೆತನದವರು ಆಳಿದಂತಹ ಈ ನಾಡು. ಕೆಂಪೇಗೌಡರು, ವೀರರಾಣಿ ಚನ್ನಮ್ಮ, ಓನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ರಾಯಣ್ಣರಂತಹ ವೀರರಿಗೆ ಜನ್ಮ ನೀಡಿದ ನಾಡು. ದಾಸರು, ಶರಣರಂತಹ ವಿಚಾರವಾದಿಗಳು ನಾಡಿನಲ್ಲಿ ಹುಟ್ಟಿ, ನಾಡಿನ ಕಲೆ, ಸಾಹಿತ್ಯ, ಸಂಗೀತವನ್ನು ಶ್ರೀಮಂತಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕಲೆ, ಸಾಹಿತ್ಯಕ್ಕೆ ನಮ್ಮ ಕನ್ನಡಿಗರು ನೀಡಿದ ಅಪಾರವಾದ ಕೊಡುಗೆಯನ್ನು ನಾವು ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ ಮುಂತಾದ ಶಿಲ್ಪಕಲೆಗಳಲ್ಲಿ ಕಾಣಬಹುದಾಗಿದೆ ಎಂದರು.

ಪ್ರಾಚೀನ ಕವಿಗಳಾದ ಆದಿಕವಿ ಪಂಪ, ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಕವಿಗಳು ಸರ್ವ ಮಾನ್ಯವಾಗಿದ್ದಾರೆ. ದಾಸ ಶ್ರೇಷ್ಠರಾಗಿ ಜನಮನ ಗೆದ್ದಿರುವ ಪುರಂದರದಾಸರು ಮತ್ತು ಕನಕದಾಸರನ್ನು ಮರೆಯಲು ಸಾಧ್ಯವಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರಕವಿಗಳಾದ ಗೋವಿಂದ ಪೈ ರವರು, ಕುವೆಂಪು ರವರು ಮತ್ತು ಜಿ.ಎಸ್.ಶಿವರುದ್ರಪ್ಪನವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.

ಕರ್ನಾಟಕವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿ, ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ..! ಎನ್ನುವ ನಾಡಗೀತೆಯನ್ನು ಸವಿಯುತ್ತಾ.. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಸುದಿನವೇ ಕರ್ನಾಟಕ ರಾಜ್ಯೋತ್ಸವ ಎಂದರು.

ದಶಕಗಳ ಹೋರಾಟದ ಫಲವಾಗಿ 1956ನೇ ನವೆಂಬರ್ 1 ರಂದು ಅಖಂಡ ಕರ್ನಾಟಕದ ಚದುರಿದ ಪ್ರದೇಶಗಳೆಲ್ಲಾ ಒಗ್ಗೂಡಿ ಮೈಸೂರು ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಅಸಂಖ್ಯಾತ ಲೇಖಕ ಮತ್ತು ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕು ಎಂದರು.

ಸೀತರಾಮ ಶಾಸ್ತ್ರಿ, ರಾಮಮೂರ್ತಿ, ಬಿ.ಎಂಶ್ರೀಕಂಠಯ್ಯ, ಜಿ.ವೆಂಕಟಸುಬ್ಬಯ್ಯ, ಪು.ತಿ ನರಸಿಂಹಚಾರ್, ಮುದ್ದಣ್ಣ, ಮಹಲಿಂಗರಂಗ, ಪಂಜೆ ಮಂಗೇಶರಾಯರ, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವರಕವಿ ಡಾ. ದ.ರಾ.ಬೇಂದ್ರೆ, ತೀ.ನಂ.ಶ್ರೀಕಂಠಯ್ಯ, ಡಿ.ಎಸ್. ಕರ್ಕಿ, ಜಿ.ಪಿ. ರಾಜರತ್ನಂ, ಪೂರ್ಣಚಂದ್ರ ತೇಜಶ್ವಿ, ಸಿದ್ದಯ್ಯ ಪುರಾಣಿಕ್, ಕೆ.ಎಸ್. ನಿಸಾರ್ ಅಹಮದ್, ಡಾ.ಸಾ.ಶಿ. ಮರುಳಯ್ಯ, ಜಿ.ಎಸ್. ಸಿದ್ದಲಿಂಗಯ್ಯ ಹೀಗೆ ಕನ್ನಡ ನಾಡು-ನುಡಿಯ ಸಿರಿಯನ್ನು ಹೆಚ್ಚಿಸಿರುವ ಕವಿ-ಸಾಹಿತಿಗಳ ಪಟ್ಟಿ ಮುಗಿಯದು ಎಂದರು.

ಕುವೆಂಪುರವರು, ಬೇಂದ್ರೆಯವರು, ಮಾಸ್ತಿಯವರು, ಗೋಕಾಕರು, ಶಿವರಾಮ ಕಾರಂತರವರು, ಅನಂತಮೂರ್ತಿಯವರು, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರವರು ಕನ್ನಡಕ್ಕೆ ಹೆಮ್ಮೆಯ ರೂಪದಲ್ಲಿ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣರಾಗಿದ್ದಾರೆ. ಇದು ನಮ್ಮ ಭಾಷೆಯ ಹೆಗ್ಗಳಿಕೆ ಎಂದು ಬಣ್ಣಿಸಿದರು.

ವಿವಿಧ ತಂಡಗಳಿಂದ ಕವಾಯತು

ಕನ್ನಡ ರಾಜ್ಯೋತ್ಸವ ಅಂಗವಾಗಿ  ತಂಡಗಳಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪುರುಷ ಪೊಲೀಸ್ ಪಡೆ, ನಾಗರೀಕ ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ ಪುರುಷ, ಗೃಹರಕ್ಷಕ ದಳ ಮಹಿಳಾ, ಅಬಕಾರಿ ದಳ, ಎನ್‌.ಸಿ.ಸಿ ಘಟಕ ದಿಂದ ಸರ್ಕಾರಿ ಬಾಲಕರ ಕಾಲೇಜು, ಸರ್ಕಾರಿ ಬಾಲಕಿಯರ ಕಾಲೇಜು, ಪಿಇಎಸ್‌ ಬಾಲಕರ ಕಾಲೇಜು, ಕಾಳೇಗೌಡ ಪ್ರೌಢ ಶಾಲೆ,ಅನಿಕೇತನ ಪ್ರೌಢ ಶಾಲೆ, ಸೈಟ್ಸ್ & ಗೈಡ್ಸ್ ಯಿಂದ ರೋಟರಿ ಪ್ರೌಢ ಶಾಲೆ,ಲಕ್ಷ್ಮೀ ಜನಾರ್ಧನ ಬಾಲಕಿಯರ ತಂಡ, ರೋಟರಿ ಪ್ರೌಢ ಶಾಲೆ, ಬಾಲಕಿಯರ ತಂಡ, ಎಜುಕೇಷನ್‌ ಸೊಸೈಟಿ ಪ್ರೌಢ ಶಾಲೆ, ಡಫೋಡಿಲ್ಸ್ ಪ್ರೌಢ ಶಾಲೆ, ಬಾಲಕರ ತಂಡ ಆದರ್ಶ ಪ್ರೌಢ ಶಾಲೆ, ಸೆಂಟ್ ಜೋಸೆಫ್ ಪ್ರೌಢ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಕವಾಯತಿನಲ್ಲಿ ಭಾಗವಹಿಸಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳು

ಸೆಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹಚ್ಚೆವು ಕನ್ನಡದ ದೀಪ', ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ `ಬಂದಿದೆ ಕನ್ನಡ ಬಿರುಸಿನಗಾಳಿ’, ಬೇಲೂರಿನಸರ್ಕಾರಿ ಪ್ರೌಢಶಾಲೆ ವಿಧ್ಯಾರ್ಥಿಗಳಿಂದ ಕನ್ನಡ, ನಾಡು, ನುಡಿ ಸಂಸ್ಕೃತಿ, ಮಾಂಡವ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಕಂಸಾಳೆ ಪ್ರಸ್ತುತಪಡಿಸಿ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಪುಟ್ಟರಾಜು, ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿ ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ಅರಣ್ಯಸಂರಕ್ಷಣಾಧಿಕಾರಿ ರುದ್ರೆನ್, ಉಪ ವಿಭಾಗಾಧಿಕಾರಿ ಐಶ್ವರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!