Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅರಣ್ಯ ಇಲಾಖೆ ನೌಕರರಿಗೆ ಸೌಲಭ್ಯ ಕಲ್ಪಿಸಲು ತಾರತಮ್ಯ: ನೌಕರರ ಪ್ರತಿಭಟನೆ

ಶ್ರೀರಂಗಪಟ್ಟಣ ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ ಸರ್ಕಾರದ ಆದೇಶದಂತೆ ಮಾಸಿಕ ಹೆಚ್ಚುವರಿ ಸೌಲಭ್ಯ ಹಾಗೂ ಕ್ಷೇಮಾಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹ ನೌಕರರು ಇದ್ದರೂ ಅಧಿಕಾರಿಗಳು ಕೆಲವರಿಗೆ ಮಾತ್ರ ಸವಲತ್ತು ಕಲ್ಪಿಸಿ ಹಲವು ನೌಕರರಿಗೆ ತಾರತಮ್ಯ ಮಾಡಿದ್ದು, ಮಾಹಿತಿ ಹಕ್ಕು ಅಧಿನಿಯಮದಡಿ ಇದರ ಮಾಹಿತಿ ಕೋರಿದ್ದರೂ ಮಾಹಿತಿ ನೀಡದ ಅಧಿಕಾರಿಗಳ ಧೋರಣೆ ಖಂಡಿಸಿ ಸೌಲಭ್ಯ ವಂಚಿತ ನೌಕರರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದ ನೌಕರರು ಶ್ರೀರಂಗಪಟ್ಟಣದ ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ 12 ಜನ ನೌಕರರು 1996ರ ಕೆಲಸಕ್ಕೆ ಸೇರಿದ್ದು ಇವರು ಮಾಸಿಕ ಹೆಚ್ಚುವರಿ ಹಾಗೂ ಕ್ಷೇಮಾಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರು ಆದರೆ ನೌಕರ ಚಂದ್ರೇಗೌಡ ತಮ್ಮನ್ನು ಸೇರಿದಂತೆ ಆರು ಮಂದಿಗೆ ಮಾತ್ರ ಶಿಫಾರಸು ಮಾಡಿದ್ದರಿಂದ ಅವರಿಗೆ ಮಾತ್ರ ಸೌಲಭ್ಯ ದೊರಕಿದ್ದು ಇನ್ನುಳಿದ ತುಳಸಿ ಕುಮಾರ್, ರವಿ ಮಜ್ಜಿಗೆ ಪುರ, ನಾಗೇಶ್, ನಂಜುಂಡಸ್ವಾಮಿ, ಲೀಲಾವತಿ ಸವಲತ್ತಿನಿಂದ ವಂಚಿತರಾಗಿದ್ದಾರೆ ಎಂದರು.

ಆರು ನೌಕರರಿಗೆ ಸವಲತ್ತು ದೊರಕಿಸಿ ಕೊಟ್ಟಿರುವ ಬಗ್ಗೆ ದಾಖಲೆ ಪಡೆಯಲು ಮಾಹಿತಿ ಹಕ್ಕು ಅಧಿನಿಯಮದ ಅಡಿ ಅರ್ಜಿ ಸಲ್ಲಿಸಿ ಏಳು ವರ್ಷವಾಗಿದ್ದರೂ ಇದುವರೆಗೂ ಮಾಹಿತಿ ನೀಡದಿರುವ ಉದ್ದೇಶ ಏನು, ಅನರ್ಹರಿಗೆ ಸೌಲಭ್ಯ ದೊರೆತು ಅರ್ಹ ನೌಕರರಿಗೆ ಸೌಲಭ್ಯ ದೊರಕಿಸಿ ಕೊಡದೇ ಇರುವ ಮರ್ಮ ಏನು ಎಂದು ಪ್ರಶ್ನಿಸಿದರು.

ಅದೇ ರೀತಿ ಇಲಾಖೆಯ ವಿಭಾಗ ಕಚೇರಿಗೆ ಮಂಡ್ಯ ವಲಯದ ನೌಕರೆ ಸಿದ್ದಮ್ಮ ಅರ್ಜಿ ಸಲ್ಲಿಸಿ ಸವಲತ್ತು ಪಡೆದಿದ್ದು, ಈ ವಲಯದಲ್ಲಿಯೂ ತಾರತಮ್ಯ ಮಾಡಲಾಗಿದೆ, ಇದೀಗ ಸವಲತ್ತು ಪಡೆಯದ ನೌಕರರ ಮಾಹಿತಿಯನ್ನು ಸರ್ಕಾರ ಕೇಳಿದ್ದು ಆದರೆ ವಿಭಾಗ ಕಚೇರಿ ಹತ್ತು ವರ್ಷ ನಿರಂತರ ದಾಖಲೆ ಕಾರಣ ಮುಂದಿಟ್ಟುಕೊಂಡು ಅರ್ಹ ನೌಕರರ ಹೆಸರನ್ನು ಶಿಫಾರಸು ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿರುವ ಮಾಹಿತಿಯನ್ನು ಉಚಿತವಾಗಿ ನೀಡಬೇಕು, ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಂದಾಯ ಮಾಡಿರುವ ಹಣಕ್ಕೆ ಶೇ.2ರಷ್ಟು ಬಡ್ಡಿ ನೀಡಬೇಕು, ಐದು ದಿನದೊಳಗೆ ದಾಖಲಾತಿ ಸಮೇತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!