ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಸುತ್ತಮುತ್ತ ಯಾವುದೇ ಬೆಟ್ಟ -ಗುಡ್ಡಗಳಿಲ್ಲ, ಅರಣ್ಯ ಪ್ರದೇಶವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಚಿರತೆ ಬಂದಿದ್ದಾದರೂ ಎಲ್ಲಿಂದ ಹೇಗೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ
ಸೋಮವಾರ ಬೆಳಗಿನ ಜಾವ ಚಿರತೆಯೆಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಇಷ್ಟಾದರೂ ಈ ಭಾಗದ ಜನರಿಗೆ ಚಿರತೆಯ ಭಯ ಸಾಕಷ್ಟು ಕಾಡುತ್ತಿದೆ. ಲೋಕಸರ ನೀರಾವರಿ ಪ್ರದೇಶವಾಗಿದ್ದು ಸುತ್ತಮುತ್ತ ರೈತರು ಕಬ್ಬು,ಭತ್ತ ಬೆಳೆಯುತ್ತಾರೆ. ಹೀಗಿರುವಾಗ ಬೆಟ್ಟಗುಡ್ಡ ಗಳಿಲ್ಲದ ಅರಣ್ಯ ಪ್ರದೇಶವಿಲ್ಲದ ಸ್ಥಳಕ್ಕೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಚಳಿಗಾಲದಲ್ಲೂ ಜನರು ಬೆವರುವಂತೆ ಮಾಡಿದೆ.
ಈ ಬಗ್ಗೆ ನುಡಿ ಕರ್ನಾಟಕ ಡಾಟ್ ಕಾಮ್. ಜೊತೆ ಮಾತನಾಡಿದ ಡಿ ಎಫ್ ಓ ರುತ್ರನ್ ಅವರು, ಈ ಭಾಗಕ್ಕೆ ಚಿರತೆ ಹೇಗೆ ಬಂದಿದೆ ಎಂಬುದು ಗೊತ್ತಿಲ್ಲ. ಆದರೆ ಇಂದು ಲೋಕಸರ ಗ್ರಾಮದಲ್ಲಿ ಸೆರಸಿಕ್ಕ ಗಂಡು ಚಿರತೆಯನ್ನು ವನ್ಯಜೀವಿ ಅರಣ್ಯ ಧಾಮಕ್ಕೆ ಕಳಿಸಿಕೊಡಲಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ಚಿರತೆ ಕಾಣಿಸಿಕೊಂಡಿದೆಯಲ್ಲಾ ಎಂಬ ಪ್ರಶ್ನೆಗೆ, ಚಿರತೆ ಕಾಣಿಸಿಕೊಂಡಾಗ ಜನರು ಕರೆ ಮಾಡಿ ತಿಳಿಸುತ್ತಾರೆ. ಆಗ ನಾವು ಅಲ್ಲಿಗೆ ಹೋಗಿ ಬೋನಿಟ್ಟು ಬರುತ್ತೇವೆ. ಕೆ.ಆರ್. ಎಸ್ ನಲ್ಲಿ ಚಿರತೆ ಕಾಣಿಸಿಕೊಂಡ ನಂತರ ಅಲ್ಲಿ ನಾಲ್ಕು ಬೋನುಗಳನ್ನು ಇಟ್ಟಿದ್ದೇವೆ. ಆದರೆ ಇದುವರೆಗೂ ಚಿರತೆ ಸಿಕ್ಕಿಲ್ಲ. ಆದರೂ ಬೋನುಗಳನ್ನು ತೆಗೆದಿಲ್ಲ ಎಂದರು.




