ಮಂಡ್ಯ ಜಿಲ್ಲೆಯ ನಾನಾ ಭಾಗಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ನಗರದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಕನ್ನಡ ಸಾಹಿತ್ಯ
ಸಮ್ಮೇಳನದ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು. ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್ಆರ್ ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಮೂರು ದಿನ 7 ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ 15 ವಾಹನಗಳು ಒಳಗೊಂಡಂತೆ 105 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಬೆಂಗಳೂರಿನಿಂದ ಮಹಿಳೆಯರಿಗೆ ಮಾತ್ರ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು 15 ವಾಹನಗಳ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಮೊದಲನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.
ಎರಡನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ಕೋರ್ಟ್ ನಿಲ್ದಾಣ- ವಿಶ್ವವಿದ್ಯಾಲಯ- ಕಲ್ಲಹಳ್ಳಿ- ವಿ.ವಿ.ನಗರ-ಶನೇಶ್ವರ ದೇವಸ್ಥಾನ-ಚಾಮುಂಡೇಶ್ವರಿ ದೇವಸ್ಥಾನ-ಕನ್ನಿಕಾ ಪರಮೇಶ್ವರಿ ದೇವಸ್ಥಾನ-ಕರ್ನಾಟಕ ಬಾರ್ ಸರ್ಕಲ್-ಹೊಸಹಳ್ಳಿ ಸರ್ಕಲ್-ಬೆ.ರಾಮಣ್ಣ ಸರ್ಕಲ್-ಎಂವಿಜಿ ಬೇಕರಿ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಸ್ವರ್ಣಸಂದ್ರ-ಮಾಂಡವ್ಯ ಕಾಲೇಜ್-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.

ಮೂರನೇಯದಾಗಿ ಹುಣಸೇಮರ-ಕಾಳಿಕಾಂಬ ದೇವಸ್ಥಾನ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಗುತ್ತಲು ಕಾಲೋನಿ-ಜಯಲಕ್ಷ್ಮಿ ಟಾಕೀಸ್-ಅರಕೇಶ್ವರ ದೇವಸ್ಥಾನ-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.
ನಾಲ್ಕನೇಯದಾಗಿ ಸತ್ವ ಪಾರ್ಕಿಂಗ್ ಸ್ಥಳದಿಂದ ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಮತ್ತು ಅದೇ ಮಾರ್ಗದಲ್ಲಿ ವಾಪಸ್ ಆಗಲಿದೆ ಎಂದು ತಿಳಿಸಿದರು.
ಎಲ್ಇಡಿ ಪರದೆ
ಸಮ್ಮೇಳನಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೆ ಎಲ್ಲಾ ಗೋಷ್ಠಿಗಳು,ಕಾರ್ಯಕ್ರಮಗಳನ್ನು ವೀಕ್ಷಿಸುವ ಜನರಿಗಾಗಿ ಎಲ್ಇಡಿ ಪರದೆ ಅಳವಡಿಸಲಾಗಿದೆ.ದಸರಾ ಮಾದರಿಯಲ್ಲಿ ನಗರದೆಲ್ಲೆಡೆ ದೀಪಾಲಂಕಾರ ಮಾಡಲಾಗಿದೆ.
4000 ಪೋಲಿಸರು
ಸಮ್ಮೇಳನದ ಬಂದೋಬಸ್ತ್ ಗಾಗಿ ಸುಮಾರು 14 ಜಿಲ್ಲೆಗಳಿಂದ ಒಟ್ಟು 4000 ಪೋಲಿಸರನ್ನು ನಿಯೋಜಿಸಲಾಗಿದೆ ಎಂದರು.




