ಮಂಡ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿ ಶ್ರಮಿಕ ನಿವಾಸಿಗಳಿಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ ನೂರಾರು ಸಂಖ್ಯೆಯಲ್ಲಿ ಸ್ಲಂ ನಿವಾಸಿಗಳು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಂಡ್ಯದ ಹಾಲಹಳ್ಳಿಯ ಸ್ಲಂ ನಿವಾಸಿಗಳು ಇಂದು ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಂದೆ ಜಮಾಯಿಸಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
2013ರಲ್ಲಿ ಹಾಲಹಳ್ಳಿಯ ಸ್ಲಂ ನಿವಾಸಿಗಳಿಗೆ ರಾಜೀವ್ ಆವಾಸ್ ಯೋಜನೆ(RAY) ಯಡಿ 712 ಮನೆಗಳ ನಿರ್ಮಾಣ ಸಂಬಂಧ ಫಲಾನುಭವಿಗಳಿಗೆ ಮಾಹಿತಿ ನೀಡಲಾಗಿತ್ತು. ಆಪ್ರಕಾರ 5 ಲಕ್ಷ ಜನಸಂಖ್ಯೆಗಿಂತ ಕಡಿಮೆ ಇರುವ ನಗರ ಪ್ರದೇಶದ ಜನರು ಮನೆಯ ಮೊತ್ತದಲ್ಲಿ ಒಂದಷ್ಟು ಹಣವನ್ನು ಫಲಾನುಭವಿಗಳು ಭರಿಸಬೇಕಿತ್ತು.
ಅದರಂತೆ ಎಸ್ಸಿ /ಎಸ್ಟಿ ಫಲಾನುಭವಿಗಳು ಶೇ.10 ಹಾಗೂ ಇತರೆ ಸಮುದಾಯದ ಜನರು ಶೇ. 12ರಷ್ಟು ಹಣವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಪಾವತಿಸಬೇಕಿತ್ತು. ಈ ಷರತ್ತಿಗೆ ಒಳಪಟ್ಟು ಹಾಲಹಳ್ಳಿಯ ಫಲಾನುಭವಿಗಳು ಹಣ ಕಟ್ಟುವುದಾಗಿ ಒಪ್ಪಿಗೆ ನೀಡಿದ್ದರು.
ಆದರೆ ಈ ಆದೇಶ 2016ರಲ್ಲಿ ಜನರಿಗೆ ತಿಳಿಸದೆ ಬದಲಾವಣೆ ಮಾಡಲಾಗಿದೆ.ಆ ಪ್ರಕಾರ ಶೇ.10ರಷ್ಟು ಹಣ ಕಟ್ಟಬೇಕಾದ ಎಸ್ಸಿಎಸ್ಟಿ ಫಲಾನುಭವಿಗಳು ಶೇ.15ರಷ್ಟು ಹಾಗೂ ಇತರೆ ಸಮುದಾಯದ ಫಲಾನುಭವಿಗಳು ಶೇ.25ರಷ್ಟು ಹಣವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕಟ್ಟಬೇಕಾಗುತ್ತದೆ. ಆದರೆ ಜನರಿಗೆ ತಿಳಿಸದೆ ಏಕಾಏಕಿ 2016ರಲ್ಲಿ ಆದೇಶ ಹೊರಡಿಸಿರುವುದು ಸರಿಯಲ್ಲ. ಕೋವಿಡ್ ಬಂದ ನಂತರ ಕೂಲಿ ಕಾರ್ಮಿಕರ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹಾಗಾಗಿ ಹಿಂದಿನ ಆದೇಶದಂತೆ ಹಣ ಕಟ್ಟುತ್ತೇವೆ. ಇಲ್ಲದಿದ್ದರೆ ನಾವೇ ನಮ್ಮ ಮನೆಗಳಿಗೆ ಹೋಗಿ ಸೇರಿಕೊಳ್ಳುತ್ತೇವೆ ಎಂದು ಕೊಳಗೇರಿ ಮಂಡಳಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಬೋರಯ್ಯ, ನಿಮ್ಮ ಬೇಡಿಕೆಯನ್ನು ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ 2013 ಅದೇಶದ ಜಾರಿ ಸಂಬಂಧ ಮಾತನಾಡುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮ, ಪ್ರಕಾಶ್, ಕೃಷ್ಣಪ್ಪ,ಬಾಬು, ನಿಂಗಮ್ಮ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿದ್ದರು.