Thursday, September 19, 2024

ಪ್ರಾಯೋಗಿಕ ಆವೃತ್ತಿ

ಎನ್‌ಎಸ್‌ಯುಐನಿಂದ ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಪದವಿ ಪರೀಕ್ಷೆ ಬರೆದು 8 ತಿಂಗಳಾದರೂ ವಿಶ್ವವಿದ್ಯಾನಿಲಯಗಳು ಫಲಿತಾಂಶವನ್ನೆ ನೀಡದ ಕಾರಣ ಸರ್ಕಾರವೇ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಸಂಘಟನೆಯಿಂದ ಮಂಡ್ಯ ನಗರದ ಕಾಲೇಜುಗಳ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ವಿಶ್ವವಿದ್ಯಾಲಯದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಸಹಾಯಕ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಿ, ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ನೆರವಾಗುವಂತೆ ಒತ್ತಾಯಿಸಿದರು.

ವಿದ್ಯಾರ್ಥಿ ವೇತನ ನೀಡಿಲ್ಲ 

ಪದವಿ ಪರೀಕ್ಷೆಗಳು ಮುಗಿದು 6 ರಿಂದ 8 ತಿಂಗಳು ಕಳೆದಿವೆ. ಫಲಿತಾಂಶ ನೀಡದ ಕಾರಣ ಮುಂದಿನ ಸೆಮಿಸ್ಟರ್‌ಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸದೆ ವಿದ್ಯಾರ್ಥಿಗಳ ಭವಿಷ್ಯನ್ನು ಹಾಳು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

2022-23 ರ ಸಾಲಿನಲ್ಲಿ ಫ್ರೀ ಮೆಟ್ರಿಕ್‌ ಹಾಗೂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ಎನ್.ಎಸ್.ಪಿ ವಿದ್ಯಾರ್ಥಿ ವೇತನ ಪೋರ್ಟಲ್ ಹಾಗೂ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ರೀತಿಯ ವಿದ್ಯಾರ್ಥಿ ವೇತನ ನೀಡಿರುವುದಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನೂ ಏಕಾಏಕಿ ತಡೆಹಿಡಿದು, ಕಾಲೇಜಿನ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೂ ಸರ್ಕಾರ ಈ ಬಗ್ಗೆ ನಿಗಾ ವಹಿಸುತ್ತಿಲ್ಲ. ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪದವಿ ಕಾಲೇಜುಗಳಿಗೆ ಅಳವಡಿಸಿರುವ ಹೊಸ ಶಿಕ್ಷಣ ನೀತಿ ಅವೈಜ್ಞಾನಿಕವಾಗಿದೆ. ಕಾಲೇಜುಗಳಲ್ಲಿ ಈಗಿರುವ ವಿದ್ಯಾರ್ಥಿಗಳಿಗೆ ಕೂರಲು ಸೂಕ್ತವಾದ ಕೊಠಡಿಗಳಿಲ್ಲ, ಮೊದಲು ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪರೀಕ್ಷೆ ಬರೆದು 8 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ

ಈ ವೇಳೆ ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರೀಕ್ಷೆ ಬರೆದು 8 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ. ಜತೆಗೆ ವಿದ್ಯಾರ್ಥಿ ವೇತನವನ್ನೂ ನೀಡಿಲ್ಲ. ಬಸ್ ಪಾಸ್ ಕೂಡ ನೀಡಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿದ್ದರೂ ಬಸ್ ಗಳ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು.

ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅವೈಜ್ಞಾನಿಕವಾಗಿದೆ. ಪಠ್ಯಕ್ರಮ ಸರಿಪಡಿಸದೆ ರಾಷ್ಟ್ರೀಯ ಶಿಕ್ಷಣ ನೀತಿ ಜಾತಿಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ? ಸರ್ಕಾರ ಈ ಕೂಡಲೇ ಫಲಿತಾಂಶ ಪ್ರಕಟಗೊಳಿಸಬೇಕು. ಜತೆಗೆ ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮನೋರಂಜನ್, ಉಪಾಧ್ಯಕ್ಷರಾದ ಎಂ.ಆರ್.ಗಗನ್, ಇಂದ್ರಜಿತ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್‌, ವಿದ್ಯಾರ್ಥಿ ಮುಖಂಡರಾದ ನಿಶ್ಚಲ್, ಕಾರ್ತಿಕ್, ಗಂಗಾಧರಗೌಡ, ರಂಜಿತ್, ಆಯುಷ್ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!