ಮಾಜಿ ಸಚಿವ, ಗಾಂಧಿವಾದಿ ಹಾಗೂ ಕಾವೇರಿ ಹೋರಾಟಗಾರ ಡಾ.ಜಿ.ಮಾದೇಗೌಡ ಪ್ರತಿಷ್ಟಾನ, ಭಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ 25 ವರ್ಷದ ರಾಜ್ಯಮಟ್ಟದ ಡಾ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಸಮಾರಂಭ ಜು.10 ರಂದು ನಡೆಯಲಿದೆ ಎಂದು ಭಾರತೀ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.10 ರಂದು ನಗರದ ಗಾಂಧೀಭವನದಲ್ಲಿ ಮಧ್ಯಾಹ್ನ 3.30 ಗಂಟೆಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪ್ರದಾನವನ್ನು ಖ್ಯಾತ ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಮಣ್ಯ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.
ಬೆಂಗಳೂರಿನ ಗೊಟ್ಟಿಗೆರೆಯ ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಶ್ರೀಮತಿ ಸರೋಜಮ್ಮ ಎಂ.ಚಂದ್ರಶೇಖರ್ ವರಿಗೆ ಸಮಾಜ ಸೇವಾ ಪ್ರಶಸ್ತಿ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಗಾಂಧೀಜೀ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಡಾ.ಮಂಜುನಾಥ್ ಹೆಚ್ ಅವರಿಗೆ ಸಾವಯವ ಕೃಷಿಕ ಪ್ರಶಸ್ತಿ ವಿತರಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸುವರೆಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಶಿಕ್ಷಣ, ಧಾರ್ಮಿಕ, ಕೈಗಾರಿಕಾ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದ ಉನ್ನತಿಗೆ ಶ್ರಮಿಸಿರುವ ಜಿ.ಮಾದೇಗೌಡರ ಮೌಲ್ಯಗಳನ್ನು ಯುವ ಜನರಿಗೆ ತಲುಪಿಸುವ ಸದುದ್ದೇಶದಿಂದ ಕಳೆದ 24 ವರ್ಷಗಳಿಂದ 48 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಬಿ.ಕೆ.ಕೃಷ್ಣ, ಹೆಚ್.ಎಂ.ನಾಗೇಶ್ ಉಪಸ್ಥಿತರಿದ್ದರು.





Very useful…daily updates