Thursday, November 19, 2026

ಪ್ರಾಯೋಗಿಕ ಆವೃತ್ತಿ

ಯೋಗಿ ಆಡಳಿತ ಹೊಗಳಿದ ”ಸಂಸದೆ ಸುಮಲತಾ ನಡೆಗೆ ಮಹಿಳಾ ಸಂಘಟನೆ ಖಂಡನೆ”

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಹತ್ರಾಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ, ನತದೃಷ್ಟೆಯ ಪೋಷಕರಿಗೆ ಶವ ನೋಡಲೂ ಅವಕಾಶ ಕೊಡದ ಅನಾಗರಿಕ ವ್ಯವಸ್ಥೆಯನ್ನು ಮಂಡ್ಯ ಸಂಸದೆ ಸುಮಲತಾ ಹೊಗಳಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ ಅವರು, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ ರಕ್ಷಣೆ ನೀಡಲಾಗದ ಯೋಗಿ ಆದಿತ್ಯನಾಥ ಆಡಳಿತವನ್ನು ಮಾದರಿ ಎನ್ನುವ ಸಂಸದೆ ಸುಮಲತಾ ಹೇಳಿಕೆ ಖಂಡನಾರ್ಹ. ಚುನಾವಣೆಯಲ್ಲಿ ಮತಯಾಚನೆಗೆ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ತಮ್ಮದೇ ಸಾಧನೆಗಳಿದ್ದಲ್ಲಿ, ಅದನ್ನು ಮುಂದಿಟ್ಟು ಮತಯಾಚಿಸುವುದು ಸರಿಯಾದ ಮಾರ್ಗ. ಆದರೆ ಮತ ಯಾಚನೆಗಾಗಿ ತಪ್ಪು ಮಾದರಿಗಳನ್ನು ಮುಂದಿಡುವ ಮತ್ತು ಜನರಿಗೆ ಕೊಟ್ಟು ಯಾತನೆಗಳನ್ನೇ ಸಾಧನೆ ಬಿಂಬಿಸುವುದು ಸಂಸದರಾದ ನಿಮಗೆ ತಕ್ಕುದ್ದಲ್ಲ ಎಂದು ತಿರುಗೇಟು ನೀಡಿದರು.

ಯೋಗಿ ಆದಿತ್ಯನಾಥರು ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಂಸದರು ಮಾತನಾಡಿದ ವಿಡಿಯೋ ನೋಡಿ ನಮಗೆ ಸಖೇದಾಶ್ಚ೯ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರಕಾರವೊಂದು ಜನರ ಹಕ್ಕುಗಳನ್ನು ದಮನ ಮಾಡಲು ಉತ್ತರಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಬುಲ್ದೋಜರ್ ಬಳಸಿದ್ದನ್ನೊಂದು ಸಾಧನೆ ಎಂದು ಬಣ್ಣಿಸಿ’ ಅದು ಕರ್ನಾಟಕಕ್ಕೆ ಮಾದರಿಯಾಗಬೇಕೆಂಬ ಅರ್ಥದಲ್ಲಿ ಮಾತನಾಡಿದ್ದು ಭಯ ಹುಟ್ಟಿಸಿದೆ ಎಂದು ಖಂಡಿಸಿದರು.

ಕೇಂದ್ರದ ಒಕ್ಕೂಟ ಸರಕಾರದ ಅಡಿಯಲ್ಲಿ ನಡೆಯುವ ರಾಷ್ಟ್ರೀಯ ಅಪರಾಧ ವರದಿ ಬ್ಯೂರೋದ ವರದಿಗಳನ್ನೊಮ್ಮೆ ಸಂಸದೆ ಸುಮಲತಾ ಅವರು ನೋಡುವ ಅಗತ್ಯವಿದೆ. ಕಳೆದ ವಾರವಷ್ಟೇ ಉನ್ನಾವ್ ನಲ್ಲಿ ಅತ್ಯಾಚಾರ ಸಂತ್ರಸ್ಥೆಯರ ಮನೆಗೆ ಬೆಂಕಿ ಇಟ್ಟು ಇಬ್ಬರು ಹಸುಳೆಗಳನ್ನು ಉರಿಯುವ ಬೆಂಕಿಗೆ ಎಸೆದ ಘಟನೆಯ ನಂತರವೂ ಅದನ್ನೊಂದು ಮಾದರಿ ಎಂದು ಕರ್ನಾಟಕ ನೆಲದ ಸಂಸದೆ ಬಣ್ಣಿಸುವುದಾದರೆ ಅವರ ಮನೋಭಾವ ಎಂತದ್ದೆಂದು ಅರ್ಥವಾಗುತ್ತಿದೆ ಎಂದು ಖಂಡಿಸಿದರು.

ಮೇಡಂ ಸುಮಲತಾರವರು ಹೇಳಿದ ಹಾಗೆ ಗೂಂಡಾಗಳು ಅಲ್ಲಿ ಭಯದಿಂದ ಓಡುತ್ತಿಲ್ಲ. ಬದಲಿಗೆ ಗೂಂಡಾಗಳ ದಾಳಿಗೆ ದಲಿತ ಮಹಿಳೆಯರು, ಅಲ್ಪ ಸಂಖ್ಯಾತರು ದುಡಿದು ತಿನ್ನುವ ಜನ ಹೆದರುತ್ತಿದ್ದಾರೆ. ಉತ್ತರಪ್ರದೇಶದ ಸಾಮಾಜಿಕ ಅಭಿವೃದ್ಧಿಯ ಇಂಡೆಕ್ಸ್ ನೋಡಿದರೆ ತಾಯಿ ಮರಣ, ಶಿಶು ಮರಣಗಳು ಏರುಗತಿಯಲ್ಲೇ ಇವೆ ಎಂಬುದು ಸಂಸದರ ಗಮನಕ್ಕೆ ಬರಬಹುದು, ಮೊದಲು ಸಂಸದರು ಅದನ್ನು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಸುನೀತ, ಜಿಲ್ಲಾ ಅಧ್ಯಕ್ಷೆ ಲತಾ ಡಿ.ಕೆ, ಜಿಲ್ಲಾ ಖಜಾಂಚಿ ರಾಣಿ, ಜಯಮ್ಮ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ