Monday, October 28, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅ.29, 30 ; ‘ಗಾಂಧಿ ಎಂಬ ವರ್ತಮಾನ’ ವಿಚಾರ ಸಂಕಿರಣ

ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟಬಲ್ ಟ್ರಸ್ಟ್‌ನ ಆಶ್ರಯದಲ್ಲಿ ‘ಗಾಂಧಿ ಎಂಬ ವರ್ತಮಾನ’ ಎರಡು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅ.29, 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅ.29 ಬೆಳಿಗ್ಗೆ 10ಕ್ಕೆ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್ ಭಾಗವಹಿಸಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 2ರಿಂದ ಗಾಂಧೀಜಿ ಮತ್ತು ಶಿಕ್ಷಣ ವಿಷಯವಾಗಿ ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಎಸ್.ತುಕಾರಾಂ, ಗಾಂಧೀಜಿ ಮತ್ತು ಖಾದಿ ವಿಷಯವಾಗಿ ಕಲಾವಿದ, ಬರಹಗಾರ ಕೆ.ಜೆ.ಸಜ್ಜಿದಾನಂದ, ಅಸ್ಪೃಶ್ಯತೆ: ಗಾಂಧೀಜಿ ಮತ್ತು ಅಂಬೇಡ್ಕರ್-ಒಂದು ಅನುಸಂಧಾನ ವಿಷಯವಾಗಿ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಎಂದು ಹೇಳಿದರು.

ಅ.30ರ ಬೆಳಿಗ್ಗೆ 10 ಗಂಟೆಯಿಂದ ಗಾಂಧೀಜಿ ಅವರ ಕನಸಿನ ಭಾರತ ಮತ್ತು ವರ್ತಮಾನ ವಿಚಾರವಾಗಿ ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್‌ಚಂದ್ರ ದತ್ತ, ಗಾಂಧೀಜಿ ಓದು ಮತ್ತು ಬರಹಗಳು ವಿಷಯವಾಗಿ ಚಿಂತಕ ಡಾ.ಕೆ.ಪಿಸುರೇಶ್, ಗಾಂಧೀಜಿ ಮತ್ತು ಅಹಿಂಸೆ ವಿಷಯವಾಗಿ ನಿವೃತ್ತ ಪ್ರಾಧ್ಯಾಪಕ ಡಾ.ಮುರಳೀಧರ್, ಗಾಂಧೀಜಿ ಮತ್ತು ತಾಯ್ತನ ವಿಷಯವಾಗಿ ಕವಯತ್ರಿ ಡಾ.ಶುಭಶ್ರೀ ಪ್ರಸಾದ್, ಗಾಂಧೀಜಿ ನಾವೇಕೆ ತಿಳಿಯಬೇಕು? ವಿಷಯವಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಬಿ.ಶಿವರಾಜು ವಿಷಯ ಮಂಡನೆ ಮಾಡಲಿದ್ದಾರೆ ಎಂದು ಎಂದು ವಿವರಿಸಿದರು.

ಅಂದು ಸಂಜೆ 3.30ಕ್ಕೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಅಧ್ಯಕ್ಷತೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಸಮಾರೋಪ ಭಾಷಣ ಮಾಡುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಎಂ.ಸಿ.ನರೇಂದ್ರ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಭಕ್ತವತ್ಸಲ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ತರಬೇತುದಾರೆ ಲತ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!