ಕನ್ನಂಬಾಡಿ ಅಣೆಕಟ್ಟೆಯ ಭದ್ರತೆ ಬಗ್ಗೆ ತಾಂತ್ರಿಕ ತಜ್ಞರ ಅಭಿಪ್ರಾಯ ಪಡೆಯದೆ ರೈತರು, ಜನಸಾಮಾನ್ಯರು ಆತಂಕಗೊಳ್ಳುವಂತೆ ಹೇಳಿಕೆ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್ ಅಣೆಕಟ್ಟೆ ಸುರಕ್ಷತೆ ಹಾಗೂ ನದಿ ಪಾತ್ರದ ರಕ್ಷಣೆ ಬಗ್ಗೆ ಆಯೋಜನೆಗೊಂಡಿದ್ದ ಮಹತ್ವದ ಕಾರ್ಯಾಗಾರಕ್ಕೆ ಬರದಿರುವುದು ಅವರ ರೈತ ವಿರೋಧಿ ನಿಲುವನ್ನು ತೋರುತ್ತದೆ ಎಂದು ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.
ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಮಂಡ್ಯದ ಕೊತ್ತತಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರು ಪ್ರಾಂತ್ಯದ ಕೃಷಿ ಚಟುವಟಿಕೆಗಳಿಗೆ ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಆಧಾರವಾಗಿರುವ ಕನ್ನಂಬಾಡಿ ಆಣೆಕಟ್ಟೆ ಸುರಕ್ಷತೆ ಬಗ್ಗೆ ಆತಂಕದ ಹೇಳಿಕೆ ನೀಡಿದ್ದ ಸುಮಲತಾ ಅವರಿಗೆ ಈ ಭಾಗದ ರೈತರು,ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ.ಇದ್ದಿದ್ದರೆ ಇಂತಹ ಆತಂಕದ ವಿಷಯವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರಲಿಲ್ಲ ಎಂದು ಕಿಡಿಕಾರಿದರು.
ರೈತರು ಹಾಗೂ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಲು ಆತಂಕದ ಆಣೆಕಟ್ಟೆ ರಕ್ಷಣೆ ಬಗ್ಗೆ ಸಂಸದರಿಗೆ ನೈಜ ಕಾಳಜಿ ಇದ್ದರೆ, ನಿನ್ನೆ ನಡೆದ ಮಹತ್ವದ ಕಾರ್ಯಾಗಾರಕ್ಕೆ ಬಂದು ಸಂಶಯ ನಿವಾರಣೆಗೆ ಮುಂದಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಮುಂಗಾರು ಆರಂಭದಲ್ಲೇ ಅವಧಿಗೆ ಮುನ್ನವೇ ಜೀವನದಿ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಲಿದೆ. ಜುಲೈ ಎರಡನೇ ವಾರದಲ್ಲಿ ಮುಖ್ಯಮಂತ್ರಿಗಳು ಕನ್ನಂಬಾಡಿಗೆ ಬಾಗಿನ ಅರ್ಪಿಸಲಿದ್ದು, ಈ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಕನ್ನಂಬಾಡಿಗೆ ಬಾಗೀನ
ಕನ್ನಂಬಾಡಿ ಆಣೆಕಟ್ಟೆ ಭರ್ತಿಯಾಗುವ ಹಿನ್ನೆಲೆಯಲ್ಲಿ ಆಣೆಕಟ್ಟೆ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ಕೃಷಿ ಇಲಾಖೆ ರೈತರಿಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಪೂರೈಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.